ದೇಶಾದ್ಯಂತ ಮುಸ್ಲಿಂ ಬಾಂಧವರು ಶುಕ್ರವಾರ ಪವಿತ್ರ ರಮಝಾನ್ ಹಬ್ಬವಾದ ಈದುಲ್ ಫಿತ್ರ್ ಅನ್ನು ಸರಳವಾಗಿ ಆಚರಿಸಿದರು. ಕೇರಳ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಹಬ್ಬ ಆಚರಿಸಲಾಗಿತ್ತು. ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಸ್ಲಿಮ್ ಬಾಂಧವರು ತಮ್ಮ ಮನೆಗಳಲ್ಲೇ ಈದ್ ನಮಾಝ್ ನಿರ್ವಹಿಸಿದರು. ಬೆಳಗ್ಗೆ ಬಡವರಿಗೆ ಫಿತ್ರ್ ಝಕಾತ್ (ದಾನ) ವಿತರಿಸಿದರು. ಮಾತ್ರವಲ್ಲ ಬಡಬಗ್ಗರಿಗೆ ಆಹಾರವನ್ನು ತಲುಪಿಸುತ್ತಿರುವುದು ಅಲ್ಲಲ್ಲಿ ಕಂಡುಬಂತು.
ಈದುಲ್ ಫಿತ್ರ್ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ನಾಡಿನ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿ, ಎಲ್ಲರಿಗೂ ಈದುಲ್ ಫಿತ್ರ್ ಶುಭಾಶಯಗಳು. ಹಬ್ಬದ ಸಂದರ್ಭದಲ್ಲಿ ಎಲ್ಲರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ನಮ್ಮ ಸಾಮೂಹಿಕ ಪ್ರಯತ್ನಗಳಿಂದ ಜಾಗತಿಕ ಸಾಂಕ್ರಾಮಿಕ ರೋಗವನ್ನು ನಿವಾರಿಸಿ, ಮಾನವ ಕಲ್ಯಾಣವನ್ನು ಹೆಚ್ಚಿಸುವತ್ತ ಕೆಲಸ ಮಾಡೋಣ. ಎಲ್ಲರಿಗೂ ಈದ್ ಮುಬಾರಕ್ ! ಎಂದು ಶುಭಾಶಯ ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಡ್ , ಜನರು “ಮಾನವೀಯತೆಯ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಮತ್ತು ಅಗತ್ಯವಿರುವ ಜನರ ಸಹಾಯದ ಹಸ್ತ ಚಾಚಬೇಕು. ಸರ್ಕಾರದ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಅನುಸರಿಸಿ ಕೊರೋನಾ ಸಾಂಕ್ರಾಮಿಕ ರೋಗವನ್ನು ನಿವಾರಿಸೋಣ. ಸಮಾಜ ಮತ್ತು ದೇಶದ ಕ್ಷೇಮಕ್ಕಾಗಿ ಕೆಲಸ ಮಾಡೋಣ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ‘ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈದುಲ್ ಫಿತ್ರ್ ಎಲ್ಲರ ಜೀವನದಲ್ಲಿ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ. ಈ ಬಾರಿ ಮನೆಯಲ್ಲೇ ಸುರಕ್ಷಿತವಾಗಿ ಈದ್ ಆಚರಿಸಿ ಎಂದು ಮನವಿ ಮಾಡಿದ್ದಾರೆ.