ನವದೆಹಲಿ : ವೆಬ್ ಸುದ್ದಿ ವಾಹಿನಿ ‘ನ್ಯೂಸ್ ಕ್ಲಿಕ್’ ಕಚೇರಿ ಮತ್ತು ಅದರ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಮತ್ತು ಸಂಪಾದಕ ಪ್ರಾಂಜಲ್ ಪಾಂಡೆ ನಿವಾಸಗಳಿಗೆ ಜಾರಿ ನಿರ್ದೇಶನಾಲಯ (ಈಡಿ) ದಾಳಿಗೆ ಸಂಪಾದಕರ ಒಕ್ಕೂಟ (ಇಜಿಐ) ಮತ್ತು ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ತೀವ್ರ ಕಳವಳ ವ್ಯಕ್ತಪಡಿಸಿವೆ. ವೆಬ್ ಪೋರ್ಟಲ್ ಮೇಲೆ ಈಡಿ ನಡೆಸಿರುವ ದಾಳಿ, “ವಿಮರ್ಶಾತ್ಮಕ ಪತ್ರಿಕೋದ್ಯಮದ ಸದ್ದಡಗಿಸುವ ಮತ್ತು ಬೆದರಿಕೆಯೊಡ್ಡುವ”, “ಅಹಿತಕರ ದಾಳಿ” ಎಂದು ಅವು ಅಭಿಪ್ರಾಯ ಪಟ್ಟಿವೆ.
ದೆಹಲಿಯ ಸಯೀದುಲಾಜಬ್ ಪ್ರದೇಶದಲ್ಲಿರುವ ‘ನ್ಯೂಸ್ ಕ್ಲಿಕ್’ ಸುದ್ದಿ ವಾಹಿನಿಯ ಕಚೇರಿ ಮತ್ತು ಅದರ ಪ್ರವರ್ತಕರ ದೆಹಲಿ ಮತ್ತು ಗಾಝಿಯಾಬಾದ್ ಗಳಲ್ಲಿರುವ ಸ್ಥಳಗಳಲ್ಲಿ ಈಡಿ ದಾಳಿ ನಡೆಸಲಾಗಿದೆ. ಸುದ್ದಿ ವಾಹಿನಿಯ ವಿರುದ್ಧ ಅಕ್ರಮ ಹಣಕಾಸು ವ್ಯವಹಾರದ ಆರೋಪ ಮಾಡಲಾಗಿದೆ.
ನ್ಯೂಸ್ ಕ್ಲಿಕ್ ನ ಕಾರ್ಯ ನಿರ್ವಹಣೆಯನ್ನು ಕಡೆಗಣಿಸಲಾಗದು ಮತ್ತು ಅದರ ಪತ್ರಕರ್ತರು ಮತ್ತು ಪಾಲುದಾರರನ್ನು ಯಾವುದೇ ರೀತಿಯಲ್ಲಿ ಕಿರುಕುಳಕ್ಕೊಳಪಡಿಸಬಾರದು ಎಂದು ಇಜಿಐ ಒತ್ತಾಯಿಸಿದೆ.
ಮಾಧ್ಯಮಗಳ ವಿರುದ್ಧ “ರೈಡ್ ರಾಜ್ (ದಾಳಿ ರಾಜ್ಯ)” ಮತ್ತು “ತಪ್ಪು ಆರೋಪಗಳ ರಾಜ್’ ಅನ್ನು ಕೊನೆಗೊಳಿಸುವಂತೆ ಪಿಸಿಐ ಸರಕಾರವನ್ನು ಒತ್ತಾಯಿಸಿದೆ.