ಮೊಟ್ಟೆ ಎಸೆದ ಪ್ರಕರಣ: ಭದ್ರತಾ ವೈಫಲ್ಯದ ಕುರಿತು “ಅಡಿಷನಲ್ ಎಸ್.ಪಿ.” ಮಟ್ಟದ ಅಧಿಕಾರಿಯಿಂದ ತನಿಖೆ: ಐಜಿಪಿ

Prasthutha|

ಮಡಿಕೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡಗು ಭೇಟಿಯ ಸಂದರ್ಭ ಪೊಲೀಸ್ ಭದ್ರತಾ ವೈಫಲ್ಯ ಹಾಗೂ ಗುಪ್ತಚರ ಇಲಾಖೆ ಕಾರ್ಯ ವೈಖರಿಯ ಬಗ್ಗೆ ವಿಪಕ್ಷಗಳು ಆರೋಪಿಸುತ್ತಿರುವ ಬಗ್ಗೆ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಪ್ರತಿಕ್ರಿಯಿಸಿ, ಮೊಟ್ಟೆ ಎಸೆದ ಪ್ರಕರಣ ಹಾಗೂ ಭದ್ರತಾ ವೈಫಲ್ಯದ ಕುರಿತು “ಅಡಿಷನಲ್ ಎಸ್.ಪಿ.” ಮಟ್ಟದ ಅಧಿಕಾರಿಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ.

- Advertisement -

ಆ ತನಿಖಾ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದರು.

ಕೊಡಗು ಜಿಲ್ಲೆಯಾದ್ಯಂತ ಆ.24 ರಿಂದ 27 ರ ಸಂಜೆವರೆಗೆ ಸೆಕ್ಷನ್ 144 ರ ಅಡಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪ್ರತಿಭಟನೆ, ಯಾವುದೇ ರೀತಿಯ ರಾಜಕೀಯ ಸಮಾವೇಶಗಳಿಗೆ ಅವಕಾಶ ಇಲ್ಲ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಮಧುಕರ್ ಪವಾರ್ ಸ್ಪಷ್ಟಪಡಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್.ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿಗೆ ಬಂದ ಸಂದರ್ಭ ಕೈಗೊಳ್ಳಲಾಗಿದ್ದ ಭದ್ರತಾ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡರು.

- Advertisement -

ತಿತಿಮತಿಯಲ್ಲಿ ಕಪ್ಪು ಬಾವುಟ ಹಾಗೂ ಸಾವರ್ಕರ್ ಫೋಟೋ ಪ್ರದರ್ಶನ, ಮಡಿಕೇರಿಯಲ್ಲಿ ಪ್ರತಿಭಟನೆ ಮತ್ತು ಮೊಟ್ಟೆ ಎಸೆತ, ಗುಡ್ಡೆಹೊಸೂರು ಮೊಟ್ಟೆ ಎಸೆತ ಪ್ರಕರಣಗಳ ಪೂರ್ವಪರಗಳನ್ನು ವಿಚಾರಿಸಿದರು. ಘಟನೆಯಲ್ಲಿ ಪಾಲ್ಗೊಂಡವರ ಮಾಹಿತಿ ಸಹಿತ ಆ ಸಂದರ್ಭ ದಾಖಲಾದ ಕೇಸ್ಗಳ ವಿವರ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಸೆಕ್ಷನ್ 144 ಆ. 24 ರಿಂದ ಜಾರಿಯಾಗುವ ಹಿನ್ನೆಲೆ ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಜಿಲ್ಲೆಯ ಗಡಿ ಭಾಗದ ಎಲ್ಲಾ ಚೆಕ್ಪೋಸ್ಟ್ ಗಳಲ್ಲಿ ಸೂಕ್ತ ತಪಾಸಣೆ ಹಾಗೂ ಭದ್ರತೆ ನೀಡುತ್ತೇವೆ ಎಂದು ಹೇಳಿದರು.

ಕೊಡಗು, ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ದಕ್ಷಿಣ ಕನ್ನಡ ಕಡೆಗಳಿಂದ ಸೂಕ್ತ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿಕೊಂಡು ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ. ಕಾನೂನು ಉಲ್ಲಂಘಿಸುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು. ಕೊಡಗಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜನಪ್ರತಿನಿಧಿಗಳು, ಧಾರ್ಮಿಕ ಸಮುದಾಯಗಳ ಮುಖಂಡರು ನೆರವಾಗಬೇಕು ಎಂದು ಮನವಿ ಮಾಡಿದರು.0

Join Whatsapp