ಶಿಕ್ಷಣ ಲಾಭಗಳಿಸುವ ವ್ಯಾಪಾರವಲ್ಲ, ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು: ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಖಾಸಗಿ ಅನುದಾನರಹಿತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್‌ನ ವಾರ್ಷಿಕ ಬೋಧನಾ ಶುಲ್ಕವನ್ನು ರೂ. 24 ಲಕ್ಷಕ್ಕೆ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿ ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಸೋಮವಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ಶಿಕ್ಷಣ ಲಾಭ ಗಳಿಸುವ ವ್ಯವಹಾರವಲ್ಲ, ಬೋಧನಾ ಶುಲ್ಕ ಯಾವಾಗಲೂ ಕೈಗೆಟುಕುವಂತಿರಬೇಕು ಎಂದಿದೆ [ನಾರಾಯಣ ವೈದ್ಯಕೀಯ ಕಾಲೇಜು ಮತ್ತು ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣ].

- Advertisement -

2011ರಲ್ಲಿ ನಿಗದಿಪಡಿಸಿದ್ದ ಶುಲ್ಕಕ್ಕಿಂತ ಏಳು ಪಟ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ 2017ರಲ್ಲಿ ಕೈಗೊಂಡ ನಿರ್ಧಾರ ಅಸಮರ್ಥನೀಯ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಎಂ.ಎಂ.ಸುಂದ್ರೇಶ್ ಅವರಿದ್ದ ಪೀಠ ನುಡಿಯಿತು.

ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಅರ್ಜಿದಾರ ವೈದ್ಯಕೀಯ ಕಾಲೇಜಿಗೆ ತಲಾ ರೂ. 2.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ ದಂಡದ ಮೊತ್ತವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸಾ) ಮತ್ತು ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಮತ್ತು ಸಮನ್ವಯ ಯೋಜನಾ ಸಮಿತಿಗೆ (MCPC) ಪಾವತಿಸುವಂತೆ ಸೂಚಿಸಿತು.

- Advertisement -

ಇದೇ ವೇಳೆ, 2017ರ ಸೆಪ್ಟೆಂಬರ್‌ನಲ್ಲಿ ಹೊರಡಿಸಲಾದ ಸರ್ಕಾರಿ ಆದೇಶದ ಅನ್ವಯ ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ್ದ ಹೆಚ್ಚುವರಿ ಶುಲ್ಕವನ್ನು ಮರುಪಾವತಿಸುವಂತೆ ವೈದ್ಯಕೀಯ ಕಾಲೇಜುಗಳಿಗೆ ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನೂ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು.

ಪ್ರವೇಶಾತಿ ಮತ್ತು ಶುಲ್ಕ ನಿಯಂತ್ರಣ ಸಮಿತಿಯು (ಎಎಫ್‌ಆರ್‌ಸಿ) ಈ ಹಿಂದೆ ನಿಗದಿಪಡಿಸಿದ್ದ ಬೋಧನಾ ಶುಲ್ಕಕ್ಕಿಂತ ಹೆಚ್ಚಿನ ಮೊತ್ತವನ್ನು ನಿಗದಿಪಡಿಸಿದ್ದರೆ ಸಂಬಂಧಪಟ್ಟ ವಿದ್ಯಾರ್ಥಿಗಳಿಂದ ಆ ಮೊತ್ತವನ್ನು ಸಂಗ್ರಹಿಸಲು ವೈದ್ಯಕೀಯ ಕಾಲೇಜುಗಳು ಮುಕ್ತವಾಗಿರುತ್ತವೆ. ಆದರೆ, ಸಂಗ್ರಹಿಸಿದ ಮೊತ್ತ ಇರಿಸಿಕೊಳ್ಳಲು ಸಂಬಂಧಪಟ್ಟ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಶುಲ್ಕದ ನಿರ್ಣಯ ಅಥವಾ ಶುಲ್ಕದ ಪರಿಶೀಲನೆ, ಶುಲ್ಕ ನಿಗದಿ ನಿಯಮಗಳಿಗೆ ಒಳಪಟ್ಟಿರಬೇಕು. ಬೋಧನಾ ಶುಲ್ಕ ಪರಿಷ್ಕರಿಸುವಾಗ ನಿಯಮಾವಳಿಗಳನ್ನು ಎಎಫ್‌ಆರ್‌ಸಿ ಪರಿಗಣಿಸುವ ಅಗತ್ಯವಿದೆ ಎಂದು ಪೀಠ ಹೇಳಿದೆ.

(ಕೃಪೆ: ಬಾರ್ & ಬೆಂಚ್)



Join Whatsapp