ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಒಂದು ದಿನ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವ ಯೋಜನೆಯಂತೆ, ಉರ್ದು ಶಾಲೆಗಳಲ್ಲಿ ಶನಿವಾರದ ಬದಲಿಗೆ ಶುಕ್ರವಾರ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸೂಚನೆ ನೀಡಿದೆ.
ಶಾಲಾ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರ ಮಕ್ಕಳ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸುವಂತೆ ಸೂಚನೆ ನೀಡಲಾಗಿದೆ.
ರಾಜ್ಯದ ಉರ್ದು ಶಾಲೆಗಳು ಶುಕ್ರವಾರ ಅರ್ಧ ದಿನ ಮತ್ತು ಶನಿವಾರ ಪೂರ್ಣ ದಿನ ಶಾಲೆ ನಡೆಯುತ್ತಿರುವ ಕಾರಣ ಉರ್ದು ಶಾಲೆಗಳಲ್ಲಿ ‘ಸಂಭ್ರಮ ಶನಿವಾರ’ ಆಚರಣೆಯನ್ನು ಶುಕ್ರವಾರೆ ಅಥವಾ ಶನಿವಾರ ಆಚರಿಸುವ ಕುರಿತು ಹಲವು ಶಾಲೆಗಳು ಮಾರ್ಗದರ್ಶನ ನೀಡುವಂತೆ ಕೋರಿದ್ದವು.
ಈ ಹಿನ್ನೆಲೆಯಲ್ಲಿ ರಾಜ್ಯದ ಉರ್ದು ಶಾಲೆಗಳಲ್ಲಿ ಶನಿವಾರ ಪೂರ್ಣ ದಿನವಾಗಿದ್ದು, ಶುಕ್ರವಾರ ಅರ್ಧ ದಿನ ಶಾಲೆ ನಡೆಯುವುದರಿಂದ ‘ಶುಕ್ರವಾರ ಬ್ಯಾಗ್ ರಹಿತ ದಿನ’ವನ್ನಾಗಿ ಆಚರಿಸಲು ಕ್ರಮ ವಹಿಸುವಂತೆ ಡಿಎಸ್ಇಆರ್ಟಿ ನಿರ್ದೇಶಕಿ ವಿ. ಸುಮಂಗಲಾ ನಿರ್ದೇಶನ ನೀಡಿದ್ದಾರೆ.