ಮುಂಬೈ : ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ಶಿವಸೇನಾ ಪಕ್ಷದ ನಾಯಕ, ತೀವ್ರ ಬಿಜೆಪಿ ಟೀಕಾಕಾರ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಗೆ ಜಾರಿ ನಿರ್ದೇಶನಾಲಯ (ಈಡಿ) ಬುಧವಾರ ಸಮನ್ಸ್ ಜಾರಿಗೊಳಿಸಿದೆ.
ಪಿಎಂಸಿ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸಂಜಯ್ ರಾವತ್ ಅವರ ಪತ್ನಿ ವರ್ಷಾಗೆ ಜ.11ರಂದು (ಸೋಮವಾರ) ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.
ಸಂಜಯ್ ರಾವಯ್ ಅವರ ಆಪ್ತರಾಗಿರುವ ಪ್ರವೀಣ್ ರಾವತ್ ಅವರ ಪತ್ನಿ ಮಾಧುರಿ ಮತ್ತು ಮತ್ತು ರಾವತ್ ನಡುವೆ 55 ಲಕ್ಷ ರೂ. ವಹಿವಾಟು ನಡೆಸಿರುವ ಪ್ರಕರಣದ ಕುರಿತು ಇಡಿ ತನಿಖೆ ನಡೆಸುತ್ತಿದೆ. ಪ್ರವೀಣ್ ರಾವತ್ ಈ ಹಿಂದೆ ಬಂಧಿಸಲ್ಪಟ್ಟಿದ್ದರು. ಬಳಿಕ ಅವರಿಗೆ ಜಾಮೀನು ಲಭಿಸಿತ್ತು.
ಸಂಸದ ಸಂಜಯ್ ರಾವತ್ ಬಿಜೆಪಿಯ ತೀವ್ರ ಟೀಕಾಕಾರಲ್ಲಿ ಒಬ್ಬರು. ಬಿಜೆಪಿ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ನಾಯಕರು, ಸಂಘಟನೆಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ವ್ಯಾಪಕ ಆರೋಪಗಳ ನಡುವೆ, ಈಡಿಯಿಂದ ಈ ಸಮನ್ಸ್ ಜಾರಿಗೊಂಡಿದೆ.