ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜೂನ್ 13 ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಇಡಿ ಇಲಾಖೆ ಹೊಸ ಸಮನ್ಸ್ ಜಾರಿ ಮಾಡಿದೆ.
ಜೂನ್ 2 ರಂದು ವಿಚಾರಣೆಗೆ ಬರುವಂತೆ ನೀಡಲಾಗಿದ್ದ ಸಮನ್ಸ್’ಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ವಿದೇಶದಲ್ಲಿರುವ ಕಾರಣ ವಿಚಾರಣೆಗೆ ಬರಲು ಸಾಧ್ಯವಿಲ್ಲ. ಜೂನ್ 5 ರ ನಂತರದ ಯಾವುದೇ ದಿನಾಂಕವನ್ನು ನೀಡುವಂತೆ ಕೇಳಿದ್ದರು.
ಜೂನ್ 8 ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತನಿಖಾ ಸಂಸ್ಥೆಯ ಮುಂದೆ ಹಾಜರಾಗಿ ವಿಚಾರಣೆ ಎದುರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.
ಇಡಿ ಇಲಾಖೆಯ ನಡೆ ಸೇಡಿನ ರಾಜಕೀಯದ ಇನ್ನೊಂದು ಮುಖ ಎಂದು ಕಾಂಗ್ರೆಸ್ ಬಣ್ಣಿಸಿದ್ದು, ಯಾವುದೇ ಒತ್ತಡದ ಮುಂದೆ ತಲೆಬಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.