ಬೆಂಗಳೂರು: ಧ್ವಜಸ್ತಂಭದಲ್ಲಿ ಭಗವಾಧ್ವಜ ಹಾರಿಸುವ ಮೂಲಕ ದೇಶದ್ರೋಹ ಕೃತ್ಯ ಎಸಗಿದವರ ಶೀಘ್ರ ಬಂಧನಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(CFI) ಒತ್ತಾಯಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ CFI ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ, “ರಾಜ್ಯದ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಕೇಸರಿ ಶಾಲು ವಿವಾದವನ್ನು ಉಡುಪಿಯ ಶಾಸಕ ರಘುಪತಿ ಭಟ್ ಹಾಗೂ ಕಾಲೇಜು ಆಡಳಿತ ಮಂಡಳಿ ರಾಜ್ಯಮಟ್ಟದಲ್ಲಿ ಪಸರಿಸುವಂತೆ ಮಾಡಿ ಎಬಿವಿಪಿ ಕಾರ್ಯಕರ್ತರನ್ನು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಛೂಬಿಟ್ಟು ಗೂಂಡಾಗಿರಿ ನಡೆಸಿದ್ದಲ್ಲದೆ, ರಾಷ್ಟ್ರಧ್ವಜ ಹಾರಿಸುವ ಧ್ವಜಸ್ತಂಭದಲ್ಲಿ ಭಗವಾಧ್ವಜ ಹಾರಿಸುವ ಮೂಲಕ ದೇಶದ್ರೋಹ ಕೃತ್ಯ ಎಸಗಿದ್ದಾರೆ. ಈ ಎಲ್ಲಾ ಪಿತೂರಿಯ ಹಿಂದೆ ಬಿಜೆಪಿ ಪ್ರೇರಿತ ಶಕ್ತಿಗಳು ಕೆಲಸ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘಪರಿವಾರವು ಕೇಸರಿ ಶಾಲು ವಿವಾದವನ್ನು ರಾಜ್ಯಾದ್ಯಂತ ಹಬ್ಬಿಸಿ ಅರಾಜಕತೆ ಸೃಷ್ಟಿಸುವ ಮುಂದುವರಿದ ಭಾಗವಾಗಿ ಬಾಗಲಕೋಟೆ, ಶಿವಮೊಗ್ಗ, ಮಂಡ್ಯ, ಕುಂದಾಪುರ ಸೇರಿದಂತೆ ಹಲವು ಜಿಲ್ಲೆಗಳ ಹಲವಾರು ಕಾಲೇಜುಗಳಲ್ಲಿ ಎಬಿವಿಪಿ ಕಾರ್ಯಕರ್ತರಿಂದ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ ವಿದ್ಯಾ ದೇಗುಲವೆಂದು ಕರೆಯಲ್ಪಡುವ ಶಾಲಾ ಕಾಲೇಜುಗಳ ಮೇಲೆ ಕಲ್ಲು ತೂರಾಟ ಮಾಡಿ ಮತ್ತು ಸಾರ್ವಜನಿಕ ಆಸ್ತಿಗಳನ್ನು ಧ್ವಂಸ ಮಾಡಿ ಗಲಭೆಗೆ ಸಂಚು ರೂಪಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಮುಗಿಸಬೇಕಾಗಿದ್ದ ಘಟನೆಯನ್ನು ರಾಜ್ಯದಾದ್ಯಂತ ಹಬ್ಬಿಸುವ ಮೂಲಕ ಬಿಜೆಪಿಯು ಗಲಭೆಗೆ ಸಂಚು ರೂಪಿಸಿರುವುದು ಇವತ್ತಿನ ಈ ಘಟನೆಯಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಇವತ್ತು(ಮಂಗಳವಾರ) ಕರ್ನಾಟಕ ಹೈಕೋರ್ಟ್ ಹಿಜಾಬ್ ವಿಚಾರವಾಗಿ ವಾದ-ಪ್ರತಿವಾದಗಳು ನಡೆಯುತ್ತಿರಬೇಕಾದರೆ ಎಬಿವಿಪಿ ಕಾರ್ಯಕರ್ತರಿಂದ ಗಲಭೆ ನಡೆಸಿ ಹಿಜಾಬ್ ವಿರುದ್ಧ ತೀರ್ಪು ಬರವುದಕ್ಕಾಗಿ ಬಿಜೆಪಿ ನಡೆಸುತ್ತಿರುವ ಪಿತೂರಿಯ ಭಾಗವಾಗಿದೆ ಇವತ್ತಿನ ಘಟನೆಗಳು. ಕರ್ನಾಟಕ ಸರ್ಕಾರ ಸಂಪೂರ್ಣವಾಗಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಎಬಿವಿಪಿ ಕಾರ್ಯಕರ್ತರ ಪುಂಡಾಟಿಕೆಗಳು ರಾಜ್ಯಾದ್ಯಂತ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆಯಾದರೂ ಗೂಂಡಾಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ರಕ್ಷಣೆ ಒದಗಿಸಲಾಗಿದೆ ಎಂದು ಅನೀಸ್ ಆರೋಪಿಸಿದ್ದಾರೆ,
ರಾಜ್ಯಾದ್ಯಂತ ಕಾಲೇಜುಗಳಲ್ಲಿ ಅರಾಜಕತೆ ಸೃಷ್ಟಿಸಿದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅನೀಸ್ ಕುಂಬ್ರ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ರಾಜ್ಯ ಸಮಿತಿ ಸದಸ್ಯ ಝುಬೈರ್ ಬೆಂಗಳೂರು, ರಾಜ್ಯ ಸಮಿತಿ ಸದಸ್ಯೆ ಮುರ್ಶಿದಾ, ಸರ್ಫರಾಝ್ ಗಂಗಾವತಿ ಭಾಗವಹಿಸಿದ್ದರು.