ಈಗಲ್‌ ಟನ್‌ ವಿವಾದ: ಟೀಕಾಕಾರರ ವಿರುದ್ಧ ಎಚ್‌ಡಿಕೆ ತೀವ್ರ ವಾಗ್ದಾಳಿ

Prasthutha|

ರಾಮನಗರ: ಈಗಲ್‌ಟನ್‌ ರೆಸಾರ್ಟ್‌ ವಿಚಾರದಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಆಗಿರುವ ಅಕ್ರಮ, ಅನ್ಯಾಯಗಳ ಬಗ್ಗೆ ಮತ್ತಷ್ಟು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

- Advertisement -

ಇಲ್ಲಿನ ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; ಸದನದಲ್ಲಿ ತಾವು ಈಗಲ್‌ಟನ್‌ ವಿಷಯ ಪ್ರಸ್ತಾಪ ಮಾಡಿದ್ದನ್ನು ಟೀಕಿಸಿದ್ದ ಸಂಸದ ಡಿ.ಕೆ.ಸುರೇಶ್‌ ಹೇಳಿಕೆಗೆ ತೀವ್ರ ತಿರುಗೇಟು ನೀಡಿದರಲ್ಲದೆ, ಅನ್ಯಾಯದ ವಿರುದ್ಧ ದನಿ ಎತ್ತುವುದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.

ಸಂಸದರ ಹೆಸರು ಹೇಳದೆಯೇ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿಗಳು; ನಾನು ಅನ್ಯಾಯವನ್ನು ಮಾತ್ರ ಪ್ರಶ್ನೆ ಮಾಡಿದ್ದೇನೆ ವಿನಾ ಯೊರೊಬ್ಬರ ಪರವಾಗಿ ಮಾತನಾಡಿಲ್ಲ. ಸದನದಲ್ಲಿ ನೀರಾವರಿ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದೇನೆ. ಮೇಕೆದಾಟು, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ, ನವಿಲೆ ಅಣೆಕಟ್ಟು ಯೋಜನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದ್ದೇನೆ. ಅದೆಲ್ಲವೂ ಈ ಇವರಿಗೆ ಕಾಣಲಿಲ್ಲವೆ ಎಂದು ಕುಟುಕಿದರು.

- Advertisement -

ಈಗಲ್‌ಟನ್‌ ಗೆ 98,000 ರೂ. ಬಿಲ್‌ ಕೊಡಬೇಕು ಎಂದು ಹೇಳಿ 982 ಕೋಟಿ ರೂ. ದಂಡ ಹಾಕಿದ್ದು ಯಾರು? ಇದು ಯಾವ ಸೀಮೆ ನ್ಯಾಯ? ನಾನು ರಾಮನಗರದಲ್ಲಿ ಇರುವುದರಿಂದಲೇ ಈ ಅನ್ಯಾಯವನ್ನು ಪ್ರಶ್ನೆ ಮಾಡಿದ್ದೇನೆ. ಅನ್ಯಾಯವನ್ನು ಅನ್ಯಾಯ ಎನ್ನುವುದೂ ತಪ್ಪೇ? ಅಂದರೆ, ಇವರು ಮಾಡುವ ಎಲ್ಲ ಅನ್ಯಾಯಗಳನ್ನು ಸಹಿಸಿಕೊಂಡು ಇರಬೇಕೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ವಿಷಯದಲ್ಲಿ ಅನ್ಯಾಯ ಆಗಿರಲಿ. ಅದನ್ನು ಜನತೆ ಮುಂದಿಡುವೆ. ಅವರಿಂದ ನಾನು ಯಾವುದೇ ವಿಚಾರಗಳನ್ನು ಕಲಿಯಬೇಕಿಲ್ಲ. ಸದನದಲ್ಲಿ ಯಾವ ವಿಷಯ ಎತ್ತಬೇಕು? ರೈತರ ವಿಷಯದಲ್ಲಿ ಏನು ಮಾತನಾಡಬೇಕು ಎಂದು ಅವರಿಂದ ಕಲಿಯಬೇಕಾ ನಾನು? ಕನಕಪುರದಲ್ಲಿ ಎಷ್ಟು ರೈತ ಕುಟುಂಬಗಳನ್ನು ಹಾಳು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಹಣದಾಹಕ್ಕೆ ಬಡವರ ಜಮೀನುಗಳನ್ನು ಹೊಡೆದುಕೊಂಡು ಬಂಡೆಗಳನ್ನು ಲೂಟಿ ಮಾಡಿದ್ದಾರೆ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಬಂಡೆಗಳನ್ನು ಒಡೆದು ವಿದೇಶಕ್ಕೆ ಸಾಗಿಸಿದವರು, ಪ್ರಾಕೃತಿಕ ಸಂಪತ್ತನ್ನು ನಾಶ ಮಾಡಿದವರು ಇವರೇ. ಇವರಿಂದ ನಾನು ಬುದ್ದಿ ಕಲಿಯಬೇಕೇ? ಎಂದು ಮಾಜಿ ಸಿಎಂ ಕಿಡಿಕಾರಿದರು.

ನೀರಾವರಿ ಬಗ್ಗೆ 3 ಗಂಟೆ ಜಾಲ ಚರ್ಚೆ ನಡೆಸಿದ್ದೇನೆ. ಎತ್ತಿನಹೊಳೆ ಪರಿಸ್ಥಿತಿ ಏನು? ಮೇಕೆದಾಟು ಪರಿಸ್ಥಿತಿ ಏನು? ಕೃಷ್ಣಾ ಮೇಲ್ದಂಡೆ ಪರಿಸ್ಥಿತಿ ಏನಾಗಿದೆ? ನವಿಲೆ ಡ್ಯಾಮ್ ಕಟ್ಟಲು ಏನಾಗಿದೆ ಸಮಸ್ಯೆ? ಇವೆಲ್ಲಾ ವಿಷಯಗಳನ್ನು ಸುದೀರ್ಘವಾಗಿ ಸದನದಲ್ಲಿ ಚರ್ಚೆ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಅವರು; ನೀರಾವರಿ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ದ್ರೋಹ ಮಾಡಿವೆ. ಇದನ್ನು ಸದನದಲ್ಲೇ ಹೇಳಿದ್ದೇನೆ ಎಂದರು.

ಕೋರ್ಟ್‌ ಆದೇಶಕ್ಕೇ ಧಿಕ್ಕಾರ!:

ಈಗಲ್‌ ಟನ್ ವಿಚಾರವಾಗಿ ರಾಜ್ಯ ಸರಕಾರ ಕೋರ್ಟ್ ಆದೇಶವನ್ನೇ ಧಿಕ್ಕರಿಸಿದೆ. ಇದರ ಬಗ್ಗೆ ನಾನು ಚರ್ಚೆ ಮಾಡಿದ್ದೇನೆ. ಅದೂ ತಪ್ಪೇ? ಜನಪ್ರತಿನಿಧಿಯ ಕರ್ತವ್ಯ ಅಂದರೆ ಇವರಿಗೆ ಕಂಡೊರ ಜಮೀನು ಲೂಟಿ ಹೊಡೆಯುವುದು, ಕಿಡ್ನಾಪ್ ಮಾಡಿಸುವುದು, ಮಕ್ಕಳನ್ನು ಹೆದರಿಸಿ ತಂದೆ-ತಾಯಿ ಕೈಯಲ್ಲಿ ರುಜು ಹಾಕಿಸಿಕೊಳ್ಳುವುದು. ಇವರ ರೀತಿ ನಾನು ಯಾರ ಜೀವನವನ್ನೂ ಹಾಳು ಮಾಡಿಲ್ಲ. ಇವರ ಹಣೆಬರಹವೆಲ್ಲ ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸರಕಾರ ನಡೆಸುವವರಿಗೆ ಕನಿಷ್ಠ ಸಾಮಾನ್ಯ ಜ್ಞಾನ ಇರಲೇಬೇಕು. ಸಹಿ ಮಾಡಬೇಕಾದರೆ ತಲೆಯಲ್ಲಿ ಬುದ್ಧಿಯೂ ಬೇಡವೇ? ಅಧಿಕಾರಿಗಳು ಹೆಜ್ಜೆ ಹೆಜ್ಜೆಗೂ ತಪ್ಪು ಮಾಡಿದ್ದಾರೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ತಾನೇ ಈಗಲ್ ಟನ್ ವಿಷಯ ನಡೆದಿರುವುದು. ಕೋರ್ಟ್ ಆದೇಶವನ್ನು ಧಿಕ್ಕಿರಿಸಿ ದಂಡ ವಿಧಿಸುವ ಆದೇಶ ಮಾಡಬೇಕಾಗಿತ್ತಾ? ಎಂದು ಅವರು ವಾಗ್ದಾಳಿ ನಡೆಸಿದರು.

ಚನ್ನಪಟ್ಟಣಕ್ಕೆ ಬರಲು ಪರ್ಮಿಷನ್ ಬೇಕಾ?

ನನ್ನ ಮತಕ್ಷೇತ್ರಕ್ಕೆ ಬರಲು ಯಾರೋಬ್ಬರ ಪರ್ಮಿಷನ್ ಪಡೆದು ಬರಬೇಕಿಲ್ಲ. ನನ್ನನ್ನು ರಾಜಕೀಯವಾಗಿ ಬೆಳಸಿದ, ಮರುಜನ್ಮ ಕೊಟ್ಟ ಕ್ಷೇತ್ರವಿದು. ಈ ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಮಾಡಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ. ಬರೀ ರಾಮನಗರ ಮಾತ್ರವಲ್ಲ, ಇಡೀ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದೇನೆ. ಅದೇ ಬೇರೆಯವರು ಏನು ಮಾಡಿದ್ದಾರೆ ಎನ್ನುವುದನ್ನು ಹೇಳಲಿ. ಅವರ ಹಣೆಬರಹ ಜನರಿಗೆ ಚೆನ್ನಾಗಿ ಗೊತ್ತಾಗಿದೆ. ಇವರು ಅಲಿಬಾಬಾ ನಲವತ್ತು ಕಳ್ಳರು ಅಂತಾರಲ್ಲ ಹಾಗೆ ಎಂದು ತಮ್ಮ ವಿರೋಧಿಗಳಿಗೆ ಚುರುಕು ಮುಟ್ಟಿಸಿದರು ಕುಮಾರಸ್ವಾಮಿ ಅವರು.

ಜನರಿಗೆ ರಕ್ಷಣೆ ಕೊಡಲು ಬಂದಿದ್ದೇನೆ ಇಲ್ಲಿ. ಜನರ ಆಸ್ತಿ ಲೂಟಿ ಹೊಡೆಯಲು ಬಂದಿಲ್ಲ. ಚನ್ನಪಟ್ಟಣದಲ್ಲಿ ಯಾರು ಯಾವ್ಯಾವ ಜಮೀನು ಬರೆಸಿಕೊಂಡಿದ್ದಾರೆ, ಒಬ್ಬ ಶಾಸಕನಾಗಿ ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಲೂಟಿ ಮಾಡಿದ್ದಾರೆ. ಇಂತಹ ಕೆಲಸವನ್ನು ನಾನು ಮಾಡಿಲ್ಲ. ಹೀಗಾಗಿ ನನಗೆ ರಾಜಕೀಯ ಅಸ್ಥಿರತೆ ಇಲ್ಲ. 2023ಕ್ಕೆ ಜನರೇ ತೀರ್ಮಾನ ಬರುತ್ತಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡೋದು ನಾನು, ಟೇಪ್ ಕಟ್ ಮಾಡೋಕೆ, ಗುದ್ದಲಿ ಪೂಜೆ ಮಾಡಿ ಬಾಷಣ ಬಿಗಿಯಲು ಬರೋರು ಇವರು ಎಂದು ಅವರು ಸಿ.ಪಿ.ಯೋಗೇಶ್ವರ್‌ ಮತ್ತು ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು.

ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ:

ನಮ್ಮ ಪಕ್ಷದ ಹೋರಾಟದಲ್ಲಿ ನಂಬಿಕೆ ಇಟ್ಟು ಯಾರೇ ಬಂದರೂ ಮುಕ್ತವಾಗಿ ಸ್ವಾಗತಿಸುವುದಾಗಿ ಕುಮಾರಸ್ವಾಮಿ ಅವರು ಹೇಳಿದರು.

ಚುನಾವಣೆ ವರ್ಷದಲ್ಲಿ ಯಾರು ಯಾರಿಗೆ ಆಫರ್ ಬರುತ್ತೋ, ಯಾರು ಯಾರಿಗೆ ಆಫರ್ ಕೊಡ್ತಾರೋ, ಯಾರು ಯಾರು ಎಲ್ಲೆಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ. ಅದೆಲ್ಲ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಇನ್ನೂ ಚುನಾವಣೆಗೆ ಒಂದು ವರ್ಷವಿದ್ದು, ರಾಜಕಾರಣದಲ್ಲಿ ಬಹಳಷ್ಡು ಬದಲಾವಣೆ ಆಗುತ್ತದೆ. ನನಗೇನೂ ಅತುರವಿಲ್ಲ. ಬಹಳಷ್ಟು ಜನ ನನ್ನನ್ನು ಭೇಟಿ ಮಾಡುತ್ತಿದ್ದಾರೆ. ನಾನು ಯಾರನ್ನೂ ನಾಳೆ ಬೆಳಗ್ಗೆಯೇ ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ. ಅವರಿಗೆ ಅನುಕೂಲವಾದಾಗ ಪಕ್ಷವನ್ನು ಸೇರಿಕೊಳ್ಳಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.



Join Whatsapp