ಇ-ಆಟೋ ಸಂಚಾರಕ್ಕೆ ಕೇಂದ್ರದ ಮಾರ್ಗಸೂಚಿ ಪ್ರಕಾರವೇ ಆದೇಶ ನೀಡಲಾಗಿದೆ: ದ.ಕ. ಜಿಲ್ಲಾಧಿಕಾರಿ

Prasthutha|

ಮಂಗಳೂರು: ಇ-ಆಟೋ ಓಡಾಟಕ್ಕೆ ಸಂಬಂಧಿಸಿ ಕೇಂದ್ರದ ಮಾರ್ಗಸೂಚಿ ಪ್ರಕಾರವೇ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟನೆ ನೀಡಿದ್ದಾರೆ.

- Advertisement -


ಇಲೆಕ್ಟ್ರಿಕ್ ಆಟೋ ಚಾಲಕರಿಗೆ ಜಿಲ್ಲೆಯಾದ್ಯಂತ ಸಂಚಾರಕ್ಕೆ ಅವಕಾಶ ನೀಡಿರುವುದನ್ನು ವಿರೋಧಿಸಿ ಸಿಎನ್ ಜಿ, ಪೆಟ್ರೋಲ್ ಬಳಕೆಯ ಆಟೋ ಚಾಲಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋಟಾರು ವಾಹನ ಕಾಯಿದೆ 66 ಪ್ರಕಾರ ಎಲ್ಪಿಜಿ ಮತ್ತು ಸಿಎನ್ಜಿ ವಾಹನಗಳಿಗೆ ಪರವಾನಗಿ ನೀಡಲಾಗಿದೆ. ಆಟೋ ರಿಕ್ಷಾಗಳ ಪರವಾನಗಿ ಅನುಮತಿ ಆಧಾರದಲ್ಲಿ ವಲಯ-1, 2 ಎಂದು ವಿಂಗಡಣೆ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಚಾಲ್ತಿಗೆ ಬಂದ ಇಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಕೇಂದ್ರ ಸರಕಾರವೇ ಸೆಕ್ಷನ್ 66ರಿಂದ ವಿನಾಯಿತಿ ನೀಡಿದೆ. ಇದರಿಂದ ಸಿಎನ್ಜಿ ಮತ್ತು ಎಲ್ಪಿಜಿ ಆಟೋ ಚಾಲಕರು ಅಸಮಾಧಾನಗೊಂಡಿದ್ದಾರೆ. ಆದರೆ, ನಾವು ಕೇಂದ್ರ ಸರಕಾರದ ಮಾರ್ಗಸೂಚಿಯನ್ನಷ್ಟೇ ಪಾಲನೆ ಮಾಡಿದ್ದೇವೆ ಎಂದರು.


ಈಗಾಗಲೇ ಇ-ಅಟೋರಿಕ್ಷಾ ಮತ್ತು ಸಿಎನ್ಜಿ-ಎಲ್ಪಿಜಿ ರಿಕ್ಷಾ ಚಾಲಕರು ಮತ್ತು ವಕೀಲರು ನನ್ನ ಸಮ್ಮುಖದಲ್ಲೇ ಸಮಗ್ರ ವಿಚಾರಣೆಯನ್ನು ಮಂಡಿಸಿದ್ದು, ಕಾನೂನು ಪ್ರಕಾರ ಇ-ಅಟೋ ಓಡಾಟಕ್ಕೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಲಾ ಗಿತ್ತು. ಇದಾದ ಬಳಿಕ ನಗರ ಪೊಲೀಸರು, ಮಂಗಳೂರು ಮಹಾನಗರಪಾಲಿಕೆಯಿಂದ ರಸ್ತೆಯ ಒತ್ತಡ, ಪಾರ್ಕಿಂಗ್ ವ್ಯವಸ್ಥೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಳ್ಳಲಾಯಿತು. ಈ ಎರಡು ಸಂಸ್ಥೆಗಳು ಪೂರಕ ಸ್ಪಂದನೆ ನೀಡಿದ ಕಾರಣ ಇ-ಅಟೋ ರಿಕ್ಷಾಕ್ಕೆ ಅನುಮತಿ ನೀಡಲಾಗಿದೆ ಎಂದವರು ಹೇಳಿದರು.



Join Whatsapp