ದುಬೈ: ಇಲ್ಲಿನ ಶಬಾಬ್ ಅಲ್ ಅಹ್ಲಿ ಕ್ರೀಡಾಂಗಣದಲ್ಲಿ, ಡಾ. ರಾಜ್ ಕಪ್ ಆರನೇ ಆವೃತ್ತಿಯ ಪೂರ್ವ ಸಿದ್ಧತಾ ಕಾರ್ಯಕ್ರಮದ ಅಂಗವಾಗಿ ನಡೆದ ‘ಸೆಲೆಬ್ರಿಟಿ ಬಾಕ್ಸ್ ಕ್ರಿಕೆಟ್’ ಪಂದ್ಯಾಕೂಟವನ್ನು ರಫೀಕ್ ದರ್ಬಾರ್ ಮಾಲೀಕತ್ವದ, ವಸಿಷ್ಠ ಸಿಂಹ ನೇತೃತ್ವದ ‘ತುಳುನಾಡ ಟೈಗರ್ಸ್’ ತಂಡ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಕನ್ನಡ, ತುಳು, ತಮಿಳು, ತೆಲುಗು, ಮಲಯಾಳಂ ಸಿನಿಮಾ ಮತ್ತು ಕಿರುತೆರೆಯ 40ಕ್ಕೂ ಕಲಾವಿದರ 6 ತಂಡಗಳ ನಡುವೆ ನಡೆದ ಪಂದ್ಯಾಟವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಿ ಶುಭ ಹಾರೈಸಿದರು. ಬಾಕ್ಸ್ ಕ್ರಿಕೆಟ್ ನ ಲೀಗ್ ಹಂತದ ಪಂದ್ಯಗಳಲ್ಲಿ ಗೆದ್ದ ಲೂಸ್ ಮಾದ ಯೋಗಿ ಹಾಗೂ ವಸಿಷ್ಠ ಸಿಂಹ ತಂಡಗಳು ಫೈನಲ್ ಹಂತಕ್ಕೆ ತಲುಪಿ ಪರಸ್ಪರ ಮುಖಾಮುಖಿಯಾದವು.
ಫೈನಲ್ ಪಂದ್ಯದಲ್ಲಿ ನಾಯಕ ಲೂಸ್ ಮಾದ ಯೋಗಿ ನೇತೃತ್ವ ಡಾಲಿ ಧನಂಜಯ, ಪನ್ನಾಗಭರಣ, ಸಿಂಪಲ್ ಸುನಿ ಒಳಗೊಂಡ ಸಮೃದ್ಧಿ ಬೆಂಗಳೂರು ತಂಡವನ್ನು ವಸಿಷ್ಠ ಸಿಂಹ ನೇತೃತ್ವದ ಪೃಥ್ವಿ ಅಂಬಾರ್, ಮಣಿಕಾಂತ್ ಕದ್ರಿ, ಬಿರುವೆರ್ ಕುಡ್ಲದ ಉದಯ ಪೂಜಾರಿ, ರಿಯಾಜ್, ಶಹಾಬುದ್ದೀನ್ ಎರ್ಮಾಳ್ ತಂಡವು ರೋಚಕವಾಗಿ ಸೋಲಿಸಿ ‘ಸೆಲೆಬ್ರಿಟಿ ಬಾಕ್ಸ್ ಕ್ರಿಕೆಟ್ 2023’ ಪ್ರಶಸ್ತಿ ಗೆದ್ದರು.
ತುಳುನಾಡ ಟೈಗರ್ಸ್ ತಂಡದ ಫೈನಲ್ ಪಂದ್ಯದ ಗೆಲುವಿನ ರೂವಾರಿ ಶಹಾಬುದ್ದೀನ್ ಎರ್ಮಾಳ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಉತ್ತಮ ಆಲ್ ರೌಂಡರ್ ಪ್ರದರ್ಶನ ನೀಡಿದ ಪೃಥ್ವಿ ಅಂಬಾರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ತುಳುನಾಡ ಟೈಗರ್ಸ್ ತಂಡದ ಮ್ಯಾನೇಜರ್ ಇಮ್ರಾನ್ ಖಾನ್ ಎರ್ಮಾಳ್, ಪೋಷಕರಾದ ರೊನಾಲ್ಡ್ ಮಾರ್ಟಿಸ್, ಇಸ್ಮಾಯಿಲ್, ಶೆರ್ಲಿ ಅಬ್ರಹಾಂ, ಜಹೀರ್ ಬೈಕಂಪಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆಯೋಜಕರಾದ ರಾಜೇಶ್ ಬ್ರಹ್ಮಾವರ, ಸೆಂಥಿಲ್, ಮಮತಾ ಸೆಂಥಿಲ್ ದುಬೈನಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿ ಆಯೋಜಿಸಿದ ಈ ಪಂದ್ಯಾವಳಿ ಕಲಾವಿದರ ಬಾಂಧವ್ಯ ಹಾಗೂ ಕ್ರೀಡಾ ಸ್ಫೂರ್ತಿಯ ಹಲವಾರು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.