ನವದೆಹಲಿ: ನಗರದ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ದುಬೈ ಅರಸನ ಆಪ್ತ ಎಂದು ಹೇಳಿಕೊಂಡು 4 ತಿಂಗಳು ತಂಗಿದ್ದಲ್ಲದೆ, 23 ಲಕ್ಷ ರೂ ಬಿಲ್ ಪಾವತಿಸದೇ ಪರಾರಿಯಾಗಿ ಬಂಧಿತನಾಗಿದ್ದ ಪುತ್ತೂರಿನ ಮುಹಮ್ಮದ್ ಷರೀಫ್‌ಗೆ ದೆಹಲಿಯ ಕೋರ್ಟ್ ಜಾಮೀನು ನೀಡಿದೆ.
ಷರೀಫ್ ಬಾಕಿ ಮೊತ್ತ 23 ಲಕ್ಷ ರೂ ಬಿಲ್ ಪಾವತಿಸಿದ್ದು ಆತನಿಗೆ ಜಾಮೀನು ನೀಡಲು ಆಕ್ಷೇಪ ಇಲ್ಲ ಎಂದು ಹೋಟೆಲ್ ಮ್ಯಾನೇಜರ್ ಹೇಳಿದ್ದರಿಂದ ನ್ಯಾಯಾಲಯವು ಷರೀಫ್‌ಗೆ ಜಾಮೀನು ನೀಡಿದೆ.
ಷರೀಫ್ ಹೋಟೆಲ್‌ನಿಂದ ಪರಾರಿಯಾದ ಬಳಿಕ ಹುಟ್ಟೂರು ಪುತ್ತೂರಿನಲ್ಲಿ ಅಡಗಿದ್ದು ಕಾರ್ಯಾಚರಣೆ ಕೈಗೊಂಡ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದರು ರಾಜಮನೆತನದ ಉದ್ಯೋಗಿ ಎಂದು ಹೇಳಿಕೊಂಡು ನಾಲ್ಕು ತಿಂಗಳ ಕಾಲ ವಾಸ್ತವ್ಯವಿದ್ದ ಮೊಹಮ್ಮದ್ ಷರೀಫ್ 23 ಲಕ್ಷ ರೂಪಾಯಿ ಬಿಲ್ ನೀಡದೇ ಹೊಟೇಲ್‌ನಿಂದ ಪರಾರಿಯಾಗಿದ್ದ. ಆತನ ವಿರುದ್ಧ ಹೊಟೇಲ್ ಸಿಬ್ಬಂದಿ ಕಳವು ಆರೋಪ ಮಾಡಿದ್ದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ದೆಹಲಿ ಲೀಲಾ ಪ್ಯಾಲೇಸ್ ಹೊಟೇಲ್‌ಗೆ ಆಗಮಿಸಿದ ಷರೀಫ್ ಅಲ್ಲಿ ರೂಮ್ ಬಾಡಿಗೆ ಪಡೆದಿದ್ದ. ಅಲ್ಲಿ ಆತ ತಾನು ಯುಎಇನಿವಾಸಿಯಾಗಿದ್ದು, ಅಬುಧಾಬಿ ರಾಜಮನೆತನದ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೊಟೇಲ್ ಸಿಬ್ಬಂದಿಗೆ ತಿಳಿಸಿದ್ದ. ಅದಕ್ಕೆ ತಕ್ಕಂತೆ ಆತ ದಾಖಲೆಗಳನ್ನು ಕೂಡ ನೀಡಿದ್ದ. ಈತ ಆಗಸ್ಟ್ 1ರಿಂದ ನವೆಂಬರ್ 20ರವರೆಗೆ ಮೂರು ತಿಂಗಳ ಕಾಲ ಹೊಟೇಲ್‌ನಲ್ಲಿ ತಂಗಿದ್ದ ಈತ ಬಳಿಕ ಹೊಟೇಲ್‌ನಿಂದ ಹೊರಟು ಹೋಗಿದ್ದ, ಈ ವೇಳೆ ಈತ ಹೊಟೇಲ್‌ನಲ್ಲಿದ್ದ ಬೆಳ್ಳಿಯ ಪಾತ್ರೆ, ಮುತ್ತಿನ ತಟ್ಟೆ ಮುಂತಾದ ಐಷಾರಾಮಿ ವಸ್ತುಗಳು ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳನ್ನು ಕೊಂಡೊಯ್ದಿದ್ದ ಎಂದು ಹೊಟೇಲ್ ಸಿಬ್ಬಂದಿ ಆರೋಪಿಸಿದ್ದರು.
ಈ ಬಗ್ಗೆ ಕಾರ್ಯಾಚರಣೆಗೆ ನಡೆಸಿದ ಪೊಲೀಸರು ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತನನ್ನು ಜ. 21 ರಂದು ಬಂಧಿಸಿದ್ದರು.ರೂಮ್ ಖಾಲಿ ಮಾಡಿದ ಆರೋಪಿ ಈ ವೇಳೆ 20 ಲಕ್ಷ ಬಿಲ್‌ಗೆ ಚೆಕ್ ನೀಡಿದ್ದ. ಆದರೆ ಅದು ಸರಿ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು. ಇದರಿಂದ ಹೊಟೇಲ್‌ಗೆ ಧೀರ್ಘ ಮೊತ್ತದ ನಷ್ಟ ಉಂಟಾಗಿತ್ತು.
ಈ ಘಟನೆಯ ನಂತರ ಹೊಟೇಲ್ ಮ್ಯಾನೇಜರ್ ಅನುಪಮ ದಾಸ್ ಗುಪ್ತಾ ಅವರು ಜನವರಿ 14 ರಂದು ದೆಹಲಿಯ ಸರೋಜಿನಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನಾಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.