ಗುಜರಾತ್ ನಲ್ಲಿ 2 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶ

Prasthutha|

ಅಹಮದಾಬಾದ್ : ವಡೋದರಾ ಹಾಗೂ ಅಂಕಲೇಶ್ವರದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿ ಬರೋಬರಿ 2 ಸಾವಿರ ಕೋಟಿ ಮೌಲ್ಯದ 713 ಕೆಜಿ ಡ್ರಗ್ ವಶಪಡಿಸಿಕೊಳ್ಳಲಾಗಿದೆ.

- Advertisement -

ರಾಜ್ಯದ ಮಾದಕ ದ್ರವ್ಯ ನಿಗ್ರಹ ದಳ(ಎಟಿಎಸ್) ವಡೋದರಾದಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಮುಂಬೈ ಪೊಲೀಸರ ಆ್ಯಂಟಿ ನಾರ್ಕೋಟಿಕ್ಸ್ ಸೆಲ್ ಭರೂಚ್‌ನ ಅಂಕಲೇಶ್ವರದಿಂದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.

ವಡೋದರಾದ ಕಾರ್ಖಾನೆಯೊಂದರಲ್ಲಿ ಎಂಡಿಎಂಎ ಡ್ರಗ್ಸ್​ ಅನ್ನು ಅಕ್ರಮವಾಗಿ ತಯಾರಿಸಲಾಗುತ್ತಿತ್ತು. ಮೋಕ್ಸಿ ಗ್ರಾಮದ ಈ ಕಾರ್ಖಾನೆಯಿಂದ ವಶಪಡಿಸಿಕೊಂಡ 200 ಕೆಜಿ ಡ್ರಗ್ಸ್​ನ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 1,000 ಕೋಟಿ ರೂಗಳಾಗಿದೆ ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ಡ್ರಗ್ಸ್ ಅನ್ನು ಸುಮಾರು 6 ತಿಂಗಳ ಹಿಂದೆಯೇ ಸಿದ್ಧಪಡಿಸಲಾಗಿತ್ತು ಎಂದು ಎಟಿಎಸ್ ಡಿಐಜಿ ದೀಪೇನ್ ಭದ್ರನ್ ಹೇಳಿದ್ದಾರೆ. ದೇಶದ ವಿವಿಧ ಭಾಗಗಳಿಗೆ ಸರಬರಾಜಾಗುವ ಎಲ್ಲಾ ರೀತಿಯ ಡ್ರಗ್ಸ್​​ಗಳನ್ನು ಒಂದೇ ಬಾರಿಗೆ ಸಿದ್ಧಪಡಿಸಿರುವ ಸಾಧ್ಯತೆಗಳಿವೆ.

- Advertisement -

ಮುಂಬೈ ಪೊಲೀಸರು ಭರೂಚ್‌ನಿಂದ 513 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಮುಂಬೈ ಪೊಲೀಸರ ಆ್ಯಂಟಿ ನಾರ್ಕೋಟಿಕ್ಸ್ ಸೆಲ್ ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರದಲ್ಲಿ 513 ಕೆಜಿ ಎಂಡಿ ಡ್ರಗ್ ಅನ್ನು ವಶಪಡಿಸಿಕೊಂಡಿದೆ. ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ 7 ಮಂದಿಯನ್ನು ನಾರ್ಕೋಟಿಕ್ ಸೆಲ್ ನ ವರ್ಲಿ ಶಾಖೆ ಬಂಧಿಸಿದೆ. ವಶಪಡಿಸಿಕೊಂಡ ಮಾದಕ ದ್ರವ್ಯದ ಮೌಲ್ಯ 1,260 ಕೋಟಿ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ವಡೋದರಾದಲ್ಲಿ ಕೆಮಿಕಲ್ ನೆಪದಲ್ಲಿ ಡ್ರಗ್ ತಯಾರಿಸಲಾಗುತ್ತಿತ್ತು ಎಂದು ಗುಜರಾತ್ ಎಟಿಎಸ್‌ನ ಡಿಐಜಿ ದೀಪೇನ್ ಭದ್ರನ್ ಹೇಳಿದ್ದಾರೆ. ವಡೋದರಾದ ಸಾವ್ಲಿ ತಹಸಿಲ್ ಬಳಿ ಮಾದಕ ವಸ್ತುಗಳ ರವಾನೆಯಾಗುತ್ತಿದೆ ಎಂಬ ರಹಸ್ಯ ಮಾಹಿತಿ ಲಭಿಸಿದ್ದರಿಂದ ಸೋಮವಾರ ಮೋಕ್ಷಿ ಗ್ರಾಮದ ಈ ಕಾರ್ಖಾನೆ ಮೇಲೆ ಎಟಿಎಸ್ ದಾಳಿ ನಡೆಸಿತ್ತು. ಅಲ್ಲಿ ಡ್ರಗ್ಸ್ ಸಂಗ್ರಹ ಪತ್ತೆಯಾಗಿದ್ದು ಮಾತ್ರವಲ್ಲದೇ ರಾಸಾಯನಿಕಗಳನ್ನು ತಯಾರಿಸುವ ನೆಪದಲ್ಲಿ ಎಂಡಿಎಂಎ ಡ್ರಗ್ಸ್ ತಯಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಯ ನಂತರವಷ್ಟೇ ಸಂಪೂರ್ಣ ಮಾಹಿತಿ ಹೊರಬೀಳಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಗೋವಾ ಮತ್ತು ಮುಂಬೈಗೆ ಡ್ರಗ್ಸ್ ಪೂರೈಕೆಯಾಗುತ್ತಿರುವುದು ಪತ್ತೆಯಾಗಿದೆ ಎಂದು ದೀಪೇನ್ ಭದ್ರನ್ ಹೇಳಿದ್ದಾರೆ. ಇಲ್ಲಿಂದ ದೇಶದ ಇತರ ಭಾಗಗಳಿಗೂ ಡ್ರಗ್ಸ್ ರವಾನೆಯಾಗಿರುವ ಬಗ್ಗೆ ಎಟಿಎಸ್ ಶಂಕೆ ವ್ಯಕ್ತಪಡಿಸಿದೆ. ಈ ದಂಧೆಯಲ್ಲಿ ಭಾಗಿಯಾಗಿರುವವರನ್ನೂ ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Join Whatsapp