ಬಿಜೆಪಿಯಿಂದ ಬರ ಅಧ್ಯಯನ ಹಾಸ್ಯಾಸ್ಪದ: ಸುನೀಲಗೌಡ ಪಾಟೀಲ

Prasthutha|

ವಿಜಯಪುರ: ಬಿಜೆಪಿ ರಾಜ್ಯ ಅಧ್ಯಕ್ಷರು ತಂಡ ಕಟ್ಟಿಕೊಂಡು ಬರ ಅಧ್ಯಯನ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಅವರು ಮೊದಲು ಪಕ್ಷದಲ್ಲಿನ ಭಿನ್ನಮತದ ಕುರಿತು ಗಮನ ಹರಿಸಲಿ. ಚುನಾವಣೆ ಮುಗಿದು ಐದಾರು ತಿಂಗಳಾಗುತ್ತಾ ಬಂದರೂ ವಿಧಾನಸಭೆ ಮತ್ತು ವಿಧಾನಪರಿಷತ್ತಿಗೆ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಾಗಲಿಲ್ಲ. ವಿಧಾನ ಮಂಡಲದಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೆ ಅಧಿವೇಶನಕ್ಕೆ ಹೋಗುವುದಿಲ್ಲ ಎಂದು ಬಿಜೆಪಿ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟರವರೆಗೆ ಪ್ರತಿಪಕ್ಷದ ನಾಯಕರನ್ನು ಏಕೆ ಆಯ್ಕೆ ಮಾಡುತ್ತಿಲ್ಲ? ಇದಕ್ಕೆ ಏನು ಕಾರಣ ಎಂಬುದರ ಕುರಿತು ಅಧ್ಯಯನ ನಡೆಸಲು ರಾಜ್ಯಾಧ್ಯಕ್ಷರು ಮೊದಲು ತಂಡ ರಚಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಟೀಕಿಸಿದ್ದಾರೆ.

- Advertisement -

ಬಿಜೆಪಿಯಲ್ಲಿಆಂತರಿಕ ಮತ್ತು ಬಹಿರಂಗ ಭಿನ್ನಮತ ಇದೆ. ಇದನ್ನು ಶಮನ ಮಾಡಲು ಸಾಧ್ಯವಾಗದೆ, ಪಕ್ಷದ ಉಸಾಬರಿಯೇ ಬೇಡ ಎಂಬ ಧೋರಣೆಯಿಂದ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರಕಾರ ಅವೈಜ್ಞಾನಿಕ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ತಿಕೋಟಾ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಡಲಾಗಿತ್ತು. ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿಗಳು ಜೊತೆ ಸತತ ಸಂಪರ್ಕದಲ್ಲಿದ್ದ ಸಚಿವ ಎಂ.ಬಿ. ಪಾಟೀಲ ಅವರು ಬರ ಘೋಷಣೆ ಮಾರ್ಗಸೂಚಿಯಂತೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಒದಗಿಸುವ ಮೂಲಕ ತಿಕೋಟಾ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಕಾರಣರಾಗಿದ್ದಾರೆ. ಈ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ ಎಂದೂ ಅವರು ಈ ಸಂದರ್ಭ ಹೇಳಿದ್ದಾರೆ.



Join Whatsapp