ವಾಷಿಂಗ್ಟನ್: ಐಸಿಸ್ ಖುರಾಸನ್ ಸಂಘಟನೆಯನ್ನು ಗುರಿಯಾಗಿಸಿ ಅಮೆರಿಕ ನಡೆಸಿರುವ ಪ್ರತಿದಾಳಿಯಲ್ಲಿ ಅಮಾಯಕ ನಾಗರಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಅಮೆರಿಕ ತಪ್ಪೊಪ್ಪಿಕೊಂಡಿದೆ.
ಅಮೆರಿಕ ಸೆಂಟ್ರಲ್ ಕಮಾಂಡ್ನ ಕಮಾಂಡರ್ ಜನರಲ್ ಫ್ರಾಂಕ್ ಮೆಕೆಂಜಿ ಈ ಕುರಿತು ತಪ್ಪೊಪ್ಪಿಕೊಂಡಿದ್ದು, ಕ್ಷಮೆಯಾಚಿಸಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಏಳು ಮಕ್ಕಳು ಸೇರಿದಂತೆ 10 ನಾಗರಿಕರು ಮೃತಪಟ್ಟಿದ್ದರು.
ಕಾಬೂಲ್ನ ಹಮೀದ್ ಕರ್ಝಾಯಿ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಅಮೆರಿಕದ 13 ಯೋಧರು ಸೇರಿದಂತೆ 100ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದರು.
‘ಸಂಪೂರ್ಣವಾಗಿ ತನಿಖೆ ನಡೆಸಿದ ಬಳಿಕ ಡ್ರೋನ್ ದಾಳಿಯಲ್ಲಿ ಮಕ್ಕಳು ಸೇರಿದಂತೆ 10 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಇದು ನಮ್ಮಿಂದಾಗಿರುವ ತಪ್ಪಾಗಿದೆ. ಅದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಓರ್ವ ಕಮಾಂಡರ್ ಆಗಿ ಈ ದಾಳಿಯ ದುರಂತದ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.