ರಿಯಾಧ್ : ಜಗತ್ಪ್ರಸಿದ್ಧ ಮಕ್ಕಾ ಮಸೀದಿಯ ಹೊರ ಆವರಣದ ಗೇಟ್ ಗೆ ಚಾಲಕನೊಬ್ಬ ತನ್ನ ಕಾರನ್ನು ನುಗ್ಗಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.
ಮಸೀದಿಯ ಹೊರ ಆವರಣದ ಒಂದು ಗೇಟ್ ಬಳಿ ಚಾಲಕನೊಬ್ಬ ನೇರವಾಗಿ ಕಾರು ಚಲಾಯಿಸಿಕೊಂಡು ನುಗ್ಗುವ ವೀಡಿಯೊ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ.
ಯಾವುದೇ ಅಪಾಯ ಆಗಿಲ್ಲ, ಆದರೆ, ಹಲವಾರು ಮಂದಿ ವಾಹನವನ್ನು ಮಸೀದಿ ಆವರಣದಿಂದ ಹೊರಗೆ ತಳ್ಳುತ್ತಿರುವ ದೃಶ್ಯದ ವೀಡಿಯೊವೊಂದು ಕೂಡ ದೊರಕಿದೆ ಎಂದು ಸೌದಿ ಪತ್ರಿಕೆ ‘ಒಕಾಝ್’ ವರದಿ ಮಾಡಿದೆ. ಚಾಲಕ ಸೌದಿ ನಾಗರಿಕನೇ ಆಗಿದ್ದು, ಆತನನ್ನು ಬಂಧಿಸಿ, ವಿಚಾರಣೆಗೆ ಪ್ರಾಸಿಕ್ಯೂಟರ್ ಮುಂದೆ ಹಾಜರು ಪಡಿಸಲು ಆದೇಶಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಸೌದಿ ಅರೇಬಿಯಾದ ಸರಕಾರಿ ಚಾನೆಲ್ ‘ಸೌದಿ ಕುರ್‘ಆನ್’ ಕೂಡ ಮಸೀದಿಯಲ್ಲಿ ನಡೆದ ಘಟನೆಯ ಕುರಿತ ವೀಡಿಯೊ ಪ್ರಸಾರ ಮಾಡಿದೆ. ಕೋವಿಡ್ – 19 ಸೋಂಕಿನ ಹಿನ್ನೆಲೆಯಲ್ಲಿ ಏಳು ತಿಂಗಳ ಬಳಿಕ, ಈ ತಿಂಗಳ ಆರಂಭದಲ್ಲಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಾಗಿತ್ತು. ಭಾನುವಾರ ಕೆಲವು ವಿದೇಶಿಗರಿಗೂ ಪ್ರಾರ್ಥನೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.