ಬೆಂಗಳೂರಿನಲ್ಲಿ ಭಾರತೀಯ ಕಂಪೆನಿ ಸೆಕ್ರೆಟರಿಗಳ 49ನೇ ಸಮಾವೇಶಕ್ಕೆ ಚಾಲನೆ

Prasthutha|

ಬೆಂಗಳೂರು: ದೇಶದಲ್ಲಿ 2014ರ ನಂತರ ಅಭಿವೃದ್ಧಿಯ ನವ ಯುಗವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದಾರೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

- Advertisement -

ನಗರದ ಅರಮನೆ ಆವರಣದಲ್ಲಿ “ಉತ್ತಮ ಆಡಳಿತ: ಸಾರ್ವತ್ರಿಕ ಧರ್ಮ” ಕುರಿತ ಮೂರು ದಿನಗಳ 49 ನೇ ಭಾರತೀಯ ಕಂಪೆನಿ ಸೆಕ್ರೆಟರಿಗಳ [ಐಸಿಎಸ್ಐ] ಸಮಾವೇಶವನ್ನು ರಾಜಭವನದಿಂದಲೇ ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಅವರ ಅಡಳಿತ ಕೌಟಿಲ್ಯನ ರಾಜನೀತಿಯನ್ನು ಅನುಸರಿಸುತ್ತಿದೆ. ಅದರಂತೆ ಜನರ ಕಲ್ಯಾಣದ ಮೇಲೆ ರಾಜ್ಯದ ಅಡಳಿತ ಕೇಂದ್ರೀಕೃತವಾಗಿರುತ್ತದೆ. “ಪ್ರಜೆಗಳು ಸಂತಸವಾಗಿರದಿದ್ದರೆ ರಾಜ ಸಂತೋಷದಿಂದಿರಲು ಸಾಧ್ಯವಿಲ್ಲ. 2014 ರಲ್ಲಿ ಪದಗ್ರಹಣ ಮಾಡಿದ ನರೇಂದ್ರ ಮೋದಿ ಹೃದಯಾಂತರಾಳದಿಂದ ಉತ್ತಮ ಆಡಳಿತ ಪರಿಕಲ್ಪನೆಯನ್ನು ಪರಿಪಾಲಿಸುತ್ತಿದ್ದಾರೆ ಎಂದರು.

ತಮ್ಮ ಆಡಳಿತಾವಧಿಯಲ್ಲಿ ಮೋದಿ ಅವರು ಹಲವಾರು ಸುಧಾರಣೆಗಳ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದಾರೆ. “ ದೇಶ ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಗಳನ್ನು ಗುರುತಿಸಿ ಪರಿಹಾರ ನೀಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ತೀಕ್ಷ್ಣ ಮತ್ತು ಕುಶಾಗ್ರಮತಿ ಆಡಳಿತದ ಮೂಲಕ ಜಾಗತಿಕ ನಾಯಕರ ಸಾಲಿಗೆ ಅವರು ಸೇರಿದ್ದಾರೆ. ಮೋದಿ ಅವರು ತಮ್ಮ ಆಡಳಿತದಲ್ಲಿ ಅಸಾಧ್ಯವಾದದ್ದನ್ನು ಸಾಧಿಸಿದ್ದಾರೆ ಎಂದರು.

- Advertisement -

ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತರುವಲ್ಲಿ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರು ಗಮನಾರ್ಹ ಸ್ಥಿರತೆಯನ್ನು ಪ್ರದರ್ಶಿಸಿದ್ದಾರೆ. ಭಾರತವನ್ನು ಅವರು ಜಾಗತಿಕ ವ್ಯಾಪಾರ ಶಕ್ತಿ ಕೇಂದ್ರವಾಗಿ ಪರಿವರ್ತಿಸಿದ್ದಾರೆ. “ಕೋವಿಡ್ ಜಾಗತಿಕ ಸಾಂಕ್ರಾಮಿಕ ಸಮಸ್ಯೆ ವಿನಾಶವುಂಟು ಮಾಡುತ್ತಿರುವಾಗಲೂ ಮೋದಿ ಅವರ ಸುಧಾರಣಾ ಕ್ರಮಗಳು ಫಲ ನೀಡಲು ಪ್ರಾರಂಭಿಸಿವೆ. ಇದರ ಪರಿಣಾಮ ಹಲವಾರು ದೇಶಗಳು ಭಾರತದಲ್ಲಿ ಹೂಡಿಕೆ ಮಾಡಲು ಹೆಚ್ಚು ಚೈತನ್ಯ ಮತ್ತು ಉತ್ಸುಕತೆ ತೋರುತ್ತಿವೆ ಎಂದು ಹೇಳಿದರು.

ರಾಜ್ಯ ಸರ್ಕಾರ ಕೂಡ ಮೋದಿ ಅವರ ಹೆಜ್ಜೆಗುರುತುಗಳನ್ನು ಅನುಸರಿಸುತ್ತಿವೆ. ಹಲವಾರು ಸಮಾಜ ಕಲ್ಯಾಣ ಮತ್ತು ಅಭಿವೃದ್ದಿ ಕಾರ್ಯಕ್ರಮಗಳನ್ನು ಆರಂಭಿಸಿ ಜನರಿಗೆ ಸನಿಹವಾಗುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರ “ಜನ ಸ್ಪಂದನ ಮತ್ತು ಜನ ಸೇವಕ ಎಂಬ ಕಾರ್ಯಕ್ರಮಗಳನ್ನು ಆರಂಭಿಸಿದ್ದು, ಆನ್ ಲೈನ್ ಸೇವೆಗಳು ಜನರಿಗೆ ಹತ್ತಿರವಾಗುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಐಸಿಎಸ್ಐ ಅಧ್ಯಕ್ಷ ಸಿಎಸ್ ನಾಗೇಂದ್ರ ಡಿ. ರಾವ್, ಉತ್ತಮ ಆಡಳಿತ ಎಲ್ಲೆಡೆ ತನ್ನ ಹೆಗ್ಗುರುತುಗಳನ್ನು ಮೂಡಿಸುತ್ತದೆ. “ ನಮ್ಮ ಸಮ್ಮೇಳನದ ದ್ಯೇಯ ಕೂಡ ಉತ್ತಮ ಆಡಳಿತವಾಗಿದ್ದು, ಉತ್ತಮ ಆಡಳಿತ ಎಂದರೆ ಅಲ್ಲಿ ಪ್ರಾಮಾಣಿಕತೆ ಇರಬೇಕು. ಹೃದಯವಂತಿಕೆಯಂತಹ ಗುಣಗಳನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಯಂತ್ರಗಳಿಂದ ಉತ್ಪಾದಿಸಲು ಸಹ ಆಗುವುದಿಲ್ಲ. ಪ್ರಾಂಜಲ ಮನಸ್ಸಿನಿಂದ ಇದನ್ನು ಸಾಧಿಸಬಹುದು. ಇದು ಮನಕುಲದ ಸಾರ, ಆಂತರಿಕ ಬೆಳಕು ಎಂದು ವಿಶ್ಲೇಷಿಸಿದರು.

ಎರಡು ದಶಕಗಳ ನಂತರ ಬೆಂಗಳೂರಿನಲ್ಲಿ ಇಂತಹ ಅತ್ಯುತ್ತಮ ಸಮಾವೇಶ ನಡೆಯುತ್ತಿದೆ. ತಾಂತ್ರಿಕ ಅಧಿವೇಶನಗಳು ಹೊಸ ಅವಕಾಶಗಳನ್ನು ತೆರೆಯುವ, ಒಳನೋಟಗಳನ್ನು ತೆರೆಯಲಿದೆ ಎಂದು ಐಸಿಎಸ್ಐ ಅಧ್ಯಕ್ಷ ಸಿಎಸ್ ನಾಗೇಂದ್ರ ಡಿ. ರಾವ್ ವಿಶ್ಲೇಷಿಸಿದರು.

Join Whatsapp