ಭೋಪಾಲ್: ಭೂಮಿಯ ನೀರೆಲ್ಲ ಒಣಗುತ್ತಿದೆ, ಆದ್ದರಿಂದ ಮದ್ಯ ಕುಡಿಯಿರಿ, ಹೊಗೆಸೊಪ್ಪು ಅಗಿಯಿರಿ, ತಂಬಾಕು ಸೇದಿರಿ. ಇವುಗಳಿಂದ ಮಾತ್ರ ಅಂತರ್ಜಲ ಉಳಿಸುವುದು ಸಾಧ್ಯ ಎಂದು ಬಿಜೆಪಿ ಸಂಸದ ಜನಾರ್ದನ ಮಿಶ್ರಾ ಬಿಟ್ಟಿ ಉಪದೇಶ ನೀಡಿದ್ದಾರೆ.
ಈ ಕುರಿತ ವೀಡಿಯೋ ವೈರಲ್ ಆಗಿದ್ದು, ಅವರು ಗಂಭೀರವಾಗಿ ಇದನ್ನು ಹೇಳಿದ್ದಾಗಿಯೂ ವರದಿಯಾಗಿದೆ.
ನವೆಂಬರ್ 6ರಂದು ಮಧ್ಯಪ್ರದೇಶದ ರೇವಾದ ಕೃಷ್ಣರಾಜ್ ಆಡಿಟೋರಿಯಂನಲ್ಲಿ ಭೂಮಿಯ ನೀರಿನ ಮಹತ್ವದ ಬಗ್ಗೆ ನಡೆದ ಸಭೆಯಲ್ಲಿ ಸಂಸದ ಮಿಶ್ರಾ ಈ ಉಪದೇಶಗಳನ್ನು ನೀಡಿದ್ದಾರೆ.
“ಯಾವುದಾದರೂ ಸರಕಾರವು ನೀರಿನ ತೆರಿಗೆ ತೆಗೆದುಹಾಕುವುದಾಗಿ ಹೇಳಿದರೆ, “ಬೇಡ, ವಿದ್ಯುತ್ ಬಿಲ್ ಸಹಿತ ಬೇರೆಲ್ಲ ತೆರಿಗೆಗಳನ್ನು ರದ್ದು ಮಾಡಲು ಕೇಳಿರಿ” ಎಂದೂ ಸಂಸದ ಮಿಶ್ರಾ ಅಪ್ಪಣೆ ಕೊಡಿಸಿದ್ದಾರೆ.
ಸೆಪ್ಟೆಂಬರ್ ನಲ್ಲಿ ಇದೇ ಮಿಶ್ರಾ ಬರಿಗೆಯ್ಯಲ್ಲಿ ಟಾಯ್ಲೆಟ್ ಸ್ವಚ್ಛಗೊಳಿಸಿದ ವೀಡಿಯೋ ವೈರಲ್ ಆಗಿತ್ತು.
“ಜನರು ನನ್ನ ಬಳಿ ಭ್ರಷ್ಟಾಚಾರದ ದೂರು ಕೊಡಲು ಬರುತ್ತಾರೆ. 15 ಲಕ್ಷದೊಳಗಿನ ಭ್ರಷ್ಟಾಚಾರವಾದರೆ ತಲೆ ಕೆಡಿಸಿಕೊಳ್ಳಬೇಡಿ ಎಂದು ನಾನು ಜನರಿಗೆ ಹೇಳುತ್ತೇನೆ” ಎಂದು ಕಳೆದ ವರ್ಷ ಸಂಸದ ಮಿಶ್ರಾ ಮಾಡಿದ ಭಾಷಣ ಕೂಡ ವೈರಲ್ ಆಗಿತ್ತು.