ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕರ್ನಾಟಕ ವಿವಿ ಮೌಲ್ಯ ಮಾಪನ ಕುಲಸಚಿವ ಡಾ.ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಸಂಬಂಧಿಸಿದಂತೆ ಬಂಧಿತ ಅತಿಥಿ ಉಪನ್ಯಾಸಕಿ ಸೌಮ್ಯ ವಿಚಾರಣೆ ವೇಳೆ ನೀಡಿದ ಮಾಹಿತಿಯನ್ನು ಆಧರಿಸಿ ಡಾ.ನಾಗರಾಜ್ ಅವರನ್ನು ಮಲ್ಲೇಶ್ವರಂ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಪಿಎಸ್ ಐ ನೇಮಕಾತಿ ಅಕ್ರಮದ ಬಳಿಕ, ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ತನಿಖೆ ನಡೆಸುವಂತೆ ಕೆಇಎ ಮಲ್ಲೇಶ್ವರಂ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು. ಈ ದೂರು ಆಧರಿಸಿ, ಈಗಾಗಲೇ ಅತಿಥಿ ಉಪನ್ಯಾಸಕಿ ಸೌಮ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೂ ಪಡೆದಿದ್ದರು.
ವಿಚಾರಣೆ ವೇಳೆ ಸೌಮ್ಯ ನೀಡಿದ ಮಾಹಿತಿ ಆಧರಿಸಿ, ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮೌಲ್ಯ ಮಾಪನ ಕುಲಸಚಿವ ಡಾ.ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಡಾ.ನಾಗರಾಜ್ ಅವರೇ ಸೌಮ್ಯ ಅವರಿಗೆ ಪಿಹೆಚ್ ಡಿ ಗೈಡ್ ಕೂಡ ಆಗಿದ್ದಾರೆ ಎಂದು ತಿಳಿದು ಬಂದಿದೆ.