ಮಂಗಳೂರು : ಅಗ್ನೇಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಫಾತಿಮಾ ಶರೀನಾ ಷರೀಫ್ ಅವರು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾ 98ರಷ್ಟು ಅಂಕ ಪಡೆದಿದ್ದಾರೆ. 600 ಅಂಕಗಳಲ್ಲಿ 589 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಕೆಮೆಸ್ಟ್ರಿ ಮತ್ತು ಹೋಂ ಸೈನ್ಸ್ ವಿಷಯದಲ್ಲಿ 100ಕ್ಕೆ ತಲಾ 100 ಅಂಕ, ಫಿಸಿಕ್ಸ್ ಮತ್ತು ಹಿಂದಿಯಲ್ಲಿ 100ಕ್ಕೆ ತಲಾ 99 ಅಂಕ ಗಳಿಸಿದ್ದಾರೆ. ಬಯೋಲಜಿಯಲ್ಲಿ 100ಕ್ಕೆ 98 ಅಂಕ, ಇಂಗ್ಲಿಷ್ ನಲ್ಲಿ 100ಕ್ಕೆ 93 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಈ ಸಾಧನೆ ಮಾಡಿರುವ ಶರೀನಾ ಅವರು ಮೂಲತಃ ಉಪ್ಪಿನಂಗಡಿ ಬಳಿಯ ವಳಾಲು ನಿವಾಸಿ ಷರೀಫ್ ಅಬ್ಬಾಸ್ ಮತ್ತು ಝರೀನಾ ಬಾನು ಅವರ ಪ್ರಥಮ ಪುತ್ರಿ. ಮುಂಬೈನಲ್ಲಿದ್ದ ಷರೀಫ್ ಅವರ ಕುಟುಂಬ ಸದ್ಯ ಮಂಗಳೂರಿನಲ್ಲಿ ನೆಲೆಸಿದೆ. ಮುಂಬೈನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದ ಶರೀನಾ, ಮಂಗಳೂರಿನ ಕ್ಯಾಂಬ್ರಿಡ್ಜ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದರು.
ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿರುವ ಶರೀನಾ ಅವರು ಮುಂದೆ ಎಂಬಿಬಿಎಸ್ ಕಲಿತು ವೈದ್ಯೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.