ಅಹಮದಾಬಾದ್ : ಈ ಹಿಂದೆ ಚೀನಾ-ಭಾರತ ಗಡಿ ಪ್ರದೇಶದ ಬಿಕ್ಕಟ್ಟು ತಾರಕಕ್ಕೇರಿದ್ದ ವೇಳೆ ಚೀನಾದ ಆಪ್ ಗಳನ್ನು ಬಹಿಷ್ಕರಿಸಿ, ಬಿಜೆಪಿ ಆಡಳಿತ ಸಾಕಷ್ಟು ಟ್ರೋಲ್ ಗೊಳಗಾಗಿತ್ತು. ಇದೀಗ, ಅರುಣಾಚಲ ಪ್ರದೇಶದಲ್ಲಿ ಚೀನಾ ಗ್ರಾಮವೊಂದನ್ನು ನಿರ್ಮಿಸಿದೆ ಎಂಬ ಆರೋಪಗಳ ನಡುವೆ, ಗುಜರಾತ್ ಸರಕಾರ ಚೀನಾ ಮೂಲದ ಹೆಸರಿರುವ ‘ಡ್ರಾಗನ್ ಫ್ರೂಟ್’ ಹೆಸರನ್ನು ‘ಕಮಲಂ’ ಎಂದು ಬದಲಾಯಿಸಿರುವುದು ಮತ್ತೊಮ್ಮೆ ಟ್ರೋಲಿಗರಿಂದ ನಗೆಪಾಟಲಿಗೀಡಾಗುವ ಎಲ್ಲಾ ಲಕ್ಷಣಗಳಿವೆ.
“ರಾಜ್ಯ ಸರಕಾರ ಡ್ರಾಗನ್ ಫ್ರೂಟ್ ಹೆಸರು ಬದಲಾಯಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಹಣ್ಣಿನ ಹೊರ ಭಾಗ ತಾವರೆ (ಕಮಲ)ದ ರೀತಿ ಇರುವುದರಿಂದ, ಈ ಹಣ್ಣಿನ ಹೆಸರನ್ನು ಕಮಲಂ ಎಂಬುದಾಗಿ ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ” ಎಂದು ಗುಜರಾತ್ ಸಿಎಂ ವಿಜಯ್ ರುಪಾನಿ ತಿಳಿಸಿದ್ದಾರೆ.
ಡ್ರಾಗನ್ ಫ್ರೂಟ್ ಹೆಸರು ಚೀನಾ ಮೂಲದಂತಿರುವುದರಿಂದ ಅದನ್ನು ಬದಲಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಡ್ರಾಗನ್ ಫ್ರೂಟ್ ಗುಜರಾತ್ ನಲ್ಲಿ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ಭುಜ್, ಗಾಂಧಿಧಾಮ, ಮಾಂಡ್ವಿಯಲ್ಲಿ ಡ್ರಾಗನ್ ಫ್ರೂಟ್ ಬೆಳೆಯಲಾಗುತ್ತದೆ.
ಡ್ರಾಗನ್ ಫ್ರೂಟ್ ಅನ್ನು ಹೆಚ್ಚಾಗಿ ದಕ್ಷಿಣ ಅಮೆರಿಕಾದಿಂದ ಭಾರತಕ್ಕೆ ಆಮದು ಮಾಡಲಾಗುತ್ತಿದೆ.