ಮಂಗಳೂರು: ಚುನಾವಣಾ ಕಾರ್ಯದಲ್ಲಿ ಭಾವನಾತ್ಮಕತೆಗೆ ಅವಕಾಶವಿಲ್ಲ, ಜವಾಬ್ದಾರಿಯು ಕೆಲಸಕ್ಕೆ ಮಾತ್ರ ಆದ್ಯತೆ, ಆದ ಕಾರಣ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುವುದೇ ಹೆಮ್ಮೆಯ ವಿಚಾರ ಎಂದು ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಯೂ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಅಭಿಪ್ರಾಯಪಟ್ಟರು.
ಅವರು ಮಾ. 30ರ ಗುರುವಾರ ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಚುನಾವಣೆಯ ಪೂರ್ವಸಿದ್ದತೆಗಳ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ಸಾಕಷ್ಟು ಚುನಾವಣಾ ಕಾರ್ಯ ನಿರ್ವಹಿಸಿದ್ದರು, ಸಾಕಷ್ಟು ಅನುಭವವಿದ್ದರೂ ಸಹ ಪ್ರತಿಯೊಂದು ಚುನಾವಣೆಯು ಹೊಸತಾಗಿರುತ್ತದೆ, ಅಲ್ಲಿ ಸಾಕಷ್ಟು ಹೊಸ ಸಂಗತಿಗಳಿರುತ್ತವೆ, ಚುನಾವಣಾ ಆಯೋಗದಿಂದ ಬರುವ ನಿರ್ದೇಶನಗಳು, ಕೆಲವೊಂದು ಘಟನೆಗಳು ವಿಭಿನ್ನವಾಗಿರುತ್ತದೆ ಅದನ್ನು ಅರಿತು ಮುಂದಿನ 45 ದಿನದೊಳಗೆ ವಾರಿಯರ್ ರೀತಿ ಕೆಲಸ ಮಾಡಬೇಕು. ಈ ಸಂದರ್ಭದಲ್ಲಿ ವರಿ ಮಾಡಿಕೊಳ್ಳಬಾರದು ಆತಂಕ, ಭಯ ರಹಿತವಾಗಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಪ್ರತಿಯೊಬ್ಬರು ಸಜ್ಜಾಗಬೇಕು ಎಂದವರು ತಿಳಿಸಿದರು.
ಚುನಾವಣಾ ಕಾರ್ಯದಲ್ಲಿ ಜ್ಞಾನವೇ ಆಯುಧ. ಆದಕಾರಣ ಚುನಾವಣಾ ಆಯೋಗ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಚೆನ್ನಾಗಿ ಓದಿಕೊಳ್ಳಬೇಕು ಹಾಗೂ ಆ ರೀತಿ ಕಾರ್ಯನಿರ್ವಹಿಸಬೇಕು. ಅದರಂತೆ ಚುನಾವಣೆ ಘೋಷಣೆಯಾದ 24, 48, 72 ಗಂಟೆಗಳಲ್ಲಿ ಚುನಾವಣಾ ಅಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಆಯೋಗ ಸ್ಪಷ್ಟವಾಗಿ ತಿಳಿಸಿದೆ, ಅದರಂತೆ ಪ್ರತಿಯೊಬ್ಬರು ಆಯಾ ತಾಸುಗಳ ಗಡುವನ್ನು ಕಾಯದೆಯೇ ಕೂಡಲೇ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.
ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.