ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೂ ಮೊದಲು 11 ದಿನ ಉಪವಾಸ ಮಾಡಿದ್ದರೆನ್ನುವುದರ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯಿಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅಷ್ಟು ದಿನ ಉಪವಾಸ ಮಾಡಿರೋದೇ ಡೌಟು. ಅಷ್ಟು ದಿನ ಉಪವಾಸ ಮಾಡಿದ್ದೇ ಆದ್ರೇ ಅವರು ಬರುಕಿರೋದು ಆಶ್ಚರ್ಯ ಎಂದು ಹೇಳಿದ್ದಾರೆ.
ಇವತ್ತು ನನ್ನ ಜೊತೆಗೆ ಬೆಳಿಗ್ಗೆ ವಾಕಿಂಗ್ ಬರ್ತಿರುವ ಒಬ್ಬರು ಡಾಕ್ಟರ್ ಹೇಳಿದ ಪ್ರಕಾರ ಅಷ್ಟು ದಿನ ಉಪವಾಸ ಮಾಡಿದರೆ ಮನುಷ್ಯ ಬದುಕಲಿಕ್ಕೇ ಸಾಧ್ಯವಿಲ್ಲ. ಆದ್ದರಿಂದ ಮೋದಿ ಉಪವಾಸ ಮಾಡಿರೋದೇ ಡೌಟು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಉಪವಾಸ ವ್ರತ ಮಾಡದೇ ಶ್ರೀರಾಮ ಮಂದಿರದ ಗರ್ಭ ಗುಡಿಗೆ ಹೋಗಿದ್ದೇ ಆದ್ರೇ ಅದು ಅಪವಿತ್ರವೇ ಸರಿ. ಆ ಸ್ಥಳ ಅಪವಿತ್ರವೇ ಹೊರತು, ಅದರಲ್ಲಿ ಶಕ್ತಿ ಉತ್ಪಾದನೆ ಆ ಸ್ಥಳದಲ್ಲಿ ಆಗೋದಿಲ್ಲ ಎಂದರು.
ಇಲ್ಲಿಯವರೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆ ಮಾಡ್ತೇವೆ ಅಂತ ಹೇಳಿದ್ರು. ಹಾಗೆ ಹೇಳುತ್ತಲೇ ಬೇರೆ ಬೇರೆ ರಾಜ್ಯದಲ್ಲಿ ರಾಜಕೀಯ ಮಾಡಿದ್ರು. ಈಗ ಅದು ಮುಗೀತು. ಇನ್ಮುಂದೆ ಅವರ ಮುಂದೆ ಯಾವುದೇ ವಿಷಯವಿಲ್ಲ. ಇನ್ನೂ ರಾಮ ಮಂದಿರ ಮಾಡ್ತೀವಿ ಅಂತ ಹೇಳೋದಕ್ಕೂ ಆಗೋದಿಲ್ಲ ಎಂಬುದಾಗಿ ತಿಳಿಸಿದರು.