ಜೋಡಿ ಕೊಲೆ,ಉದ್ಯಮಿ ಮನೆ ಲೂಟಿ : ಮಾಜಿ ಕಾರು ಚಾಲಕ, ಅಣ್ಣ-ತಮ್ಮ ಸೇರಿ ಮೂವರು ಸೆರೆ

Prasthutha|

ಬೆಂಗಳೂರು: ಕೋರಮಂಗಲದ ಉದ್ಯಮಿ ರಾಜಗೋಪಾಲ ರೆಡ್ಡಿ ಅವರ ಮನೆಯಲ್ಲಿ ಜೋಡಿ ಕೊಲೆ ನಡೆಸಿ‌ ಹಣ ಚಿನ್ನಾಭರಣಗಳನ್ನು ಲೂಟಿ‌ ಮಾಡಿದ ಪ್ರಕರಣವನ್ನು 24 ಗಂಟೆಗಳೊಳಗೆ ಭೇದಿಸಿರುವ ಈಶಾನ್ಯ ವಿಭಾಗದ ಪೊಲೀಸರು ಮಾಜಿ ಕಾರು ಚಾಲಕ ಸೇರಿ ಮೂವರನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

- Advertisement -

ರಾಜಗೋಪಾಲ ರೆಡ್ಡಿ‌ ಅವರ ಮನೆಯಲ್ಲಿ ಹಿಂದೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದ ಜಗದೀಶ್(25) ಹಾಗೂ ಆತನ ಪಕ್ಕದ ಮನೆಯಲ್ಲಿದ್ದ ಅಣ್ಣ-ತಮ್ಮ ಅಭಿಷೇಕ್(23) ಮತ್ತು ಕಿರಣ್(21) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ‌ತಿಳಿಸಿದರು.

ರೆಡ್ಡಿ ಅವರ ಮನೆಯಲ್ಲಿ ಲೂಟಿ‌ ಮಾಡಿದ್ದ 5ಲಕ್ಷ ನಗದು ವಿದೇಶಿ ಕರೆನ್ಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.

- Advertisement -

ಕಳೆದ ಡಿ.17 ರಂದು ರಾಜಗೋಪಾಲ ರೆಡ್ಡಿ ಮತ್ತು ಕುಟುಂಬದವರೆಲ್ಲ ಮದುವೆಗಾಗಿ ಅನಂತಪುರಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಅಸ್ಸಾಂ ಮೂಲದ ಬಹದ್ದೂರ್ ಹಾಗೂ ಮನೆ ಕೆಲಸದವನಾದ ಕರಿಯಪ್ಪನನ್ನು ಮಧ್ಯರಾತ್ರಿ ಜೋಡಿ‌ ಕೊಲೆಗೈದು ನಗದು ಚಿನ್ನಾಭರಣಗಳನ್ನು ಆರೋಪಿಗಳು ದೋಚಿಕೊಂಡು ಹೋಗಿದ್ದರು.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಮೊದಲು ಕರಿಯಪ್ಪನ  ಮೃತದೇಹ ಸಿಕ್ಕಿದ್ದು ಸೆಕ್ಯುರಿಟಿ ಗಾರ್ಡ್ ಬಹದ್ದೂರ್ ಈ ಹತ್ಯೆ ಮಾಡಿ ಓಡಿಹೋಗಿದ್ದಾನೆ ಎಂಬ ಅನುಮಾನದ ಮೇರೆಗೆ ತನಿಖೆ ಪ್ರಾರಂಭ ಮಾಡಿದ್ದಾಗ ಮನೆಯ ನೀರಿನ ತೊಟ್ಟಿಯಲ್ಲಿ ಬಹದ್ದೂರ್ ಮೃತದೇಹ ಕೂಡ ಸಿಕ್ಕಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೋರಮಂಗಲ ಠಾಣೆ ಇನ್ಸ್‌’ಪೆಕ್ಟರ್ ಅವರನ್ನೊಳಗೊಂಡ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ತನಿಖೆಯನ್ನು ತೀವ್ರಗೊಳಿಸಿದಾಗ ಜೋಡಿ ಕೊಲೆ ಮಾಡಿದ ಅನುಮಾನ ಮನೆಯ ಮಾಜಿ ಚಾಲಕ ಜಗದೀಶ್ ಮೇಲೆ ತಿರುಗಿ ಖಚಿತವಾದ ಮಾಹಿತಿಯನ್ನು ಆಧರಿಸಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬಾಯ್ಬಿಟ್ಟಿದ್ದಾನೆ.

ಜಗದೀಶ್ ಮೊದಲು ರಾಜಗೋಪಾಲ ರೆಡ್ಡಿ ಮನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಆತನಿಗೆ ಹುಡುಗಿಯರ ಶೋಕಿಯಿದ್ದು, ವೈಯಕ್ತಿಕ ಕೆಲಸಕ್ಕೂ ರಾಜಗೋಪಾಲರೆಡ್ಡಿ ಕಾರನ್ನೇ ತೆಗೆದುಕೊಂಡು ಹೋಗುತ್ತಿದ್ದ. ಇವರ ಐಷಾರಾಮಿ ಕಾರುಗಳಲ್ಲಿ ಹುಡುಗಿಯರನ್ನು ಸುತ್ತಾಡಿಸುತ್ತಿದ್ದ. ಹೀಗೆ ಕಳೆದ ವರ್ಷ ಆಡಿ ಕಾರನ್ನು ಜಗದೀಶ್ ತೆಗೆದುಕೊಂಡು ಹೋಗಿದ್ದಾಗ ಅದು ಅಪಘಾತಕ್ಕೀಡಾಗಿತ್ತು. ಆಗ ರಾಜಗೋಪಾಲ್ ರೆಡ್ಡಿ ಅವರು ಜಗದೀಶನಿಗೆ ಬೈದು, ಕೆಲಸದಿಂದ ತೆಗೆದು ಹಾಕಿದ್ದರು.

ಕೆಲಸದಲ್ಲಿರುವಾಗ ರಾಜಗೋಪಾಲ್ ರೆಡ್ಡಿ ಮನೆಯಲ್ಲಿ ನಗದು ಚಿನ್ನಾಭರಣಗಳು ಇರುವುದನ್ನು ಗಮನಿಸಿದ್ದ ಜಗದೀಶ್ ಪಕ್ಕದ ಮನೆಯ ಅಣ್ಣ-ತಮ್ಮನನ್ನು ಜೊತೆ ಮಾಡಿಕೊಂಡು ಸಂಚು ರೂಪಿಸಿ ಕೃತ್ಯ ನಡೆಸಿರುವುದನ್ನು ಬಾಯ್ಬಿಟ್ಟಿದ್ದು ಅವರನ್ನು ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಆರೋಪಿಗಳ ಬಂಧನಕ್ಕೆ ರಾಜಗೋಪಾಲ್ ರೆಡ್ಡಿ ಅವರ ಮನೆಯ ಸುತ್ತಮುತ್ತಲಿನ ಸುಮಾರು 50 ಸಿಸಿಟಿವಿಯನ್ನು ಪರಿಶೀಲನೆ ನಡೆಸಲಾಗಿದೆ. ನೆಟ್ ವರ್ಕ್ ಡಂಪ್, ಸಿಡಿಆರ್ ತೆಗೆದು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗಿತ್ತು.



Join Whatsapp