ಮಹದಾಯಿ ಯೋಜನೆಗೆ ಸಂಬಂಧಿಸಿ ಡಬಲ್ ಎಂಜಿನ್ ಸರ್ಕಾರದಿಂದ ವಂಚನೆ: ಬ್ರಿಜೇಶ್ ಕಾಳಪ್ಪ

Prasthutha|

ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಕರ್ನಾಟಕದ ಜನರನ್ನು ವಂಚಿಸುತ್ತಿದ್ದು, ಕೇವಲ ಚುನಾವಣೆ ಉದ್ದೇಶದಿಂದ ಕೇಂದ್ರ ಜಲ ನಿಗಮವು (ಸಿಡಬ್ಲ್ಯೂಸಿ) ಅನುಮತಿ ನೀಡಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಮಹದಾಯಿ ನದಿವಿವಾದ ನ್ಯಾಯಮಂಡಳಿಯಲ್ಲಿ ಕರ್ನಾಟಕದ ಪರ ವಕಾಲತ್ತು ವಹಿಸಿದ್ದ ಬ್ರಿಜೇಶ್ ಕಾಳಪ್ಪ ಹೇಳಿದರು.

- Advertisement -


ಬೆಂಗಳೂರಿನ ಪ್ರೆಸ್’ಕ್ಲಬ್’ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿಯವರು ಮಹದಾಯಿ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದ ಸಿಡಬ್ಲ್ಯೂಸಿ ಅನುಮತಿ ಪತ್ರದಂತೆ ಕಾಣುವ ದಿನಾಂಕವಿಲ್ಲದ ಪತ್ರವೊಂದನ್ನು (ಸಂಖ್ಯೆ T-28027/2/2022-PA(S)DTE) ಡಿಸೆಂಬರ್ 29, 2022ರಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಮಹದಾಯಿ ವಿವಾದದಲ್ಲಿ ಕರ್ನಾಟಕಕ್ಕೆ ನ್ಯಾಯ ದೊರೆಕಿಸಿಕೊಟ್ಟಿದೆ ಎಂದು ಇಷ್ಟಕ್ಕೇ ಬಿಂಬಿಸುವುದು ಸರಿಯಲ್ಲ. ಈ ಹಿಂದೆ, ಗೋವಾ ವ್ಯಕ್ತಪಡಿಸಿದ್ದ ಆತಂಕವನ್ನು ಪರಿಗಣಿಸಿದ ನಂತರವೂ ಕೇಂದ್ರ ಸರ್ಕಾರವು ಏಪ್ರಿಲ್ 30, 2002ರಂದು ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಆಗ ಕೂಡ ಇದೇ ಬಿಜೆಪಿ ನೇತೃತ್ವದ ಎನ್’ಡಿಎ ಸರ್ಕಾರವು ಅಧಿಕಾರದಲ್ಲಿತ್ತು. ಕೇವಲ ಐದು ತಿಂಗಳ ನಂತರ, ಅಂದರೆ ಸೆಪ್ಟೆಂಬರ್ 19, 2002ರಂದು ತಾತ್ವಿಕ ಒಪ್ಪಿಗೆಯನ್ನು ಬಿಜೆಪಿ ಸರ್ಕಾರವು ಅಮಾನತಿನಲ್ಲಿ ಇಟ್ಟಿತು. ಕರ್ನಾಟಕಕ್ಕೆ ಬಿಜೆಪಿ ಮಾಡಿದ್ದ ಈ ದ್ರೋಹವನ್ನು ನಾವು ಮರೆಯಬಾರದು” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.

“2006ರಲ್ಲಿ ಗೋವಾ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರಿಂದ, 22.10.2010ರಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ನ್ಯಾ. ಜೆ.ಎಂ.ಪಂಚಾಲ್’ರವರ ನೇತೃತ್ವದಲ್ಲಿ ಮಹದಾಯಿ ನದಿ ವಿವಾದ ನ್ಯಾಯಮಂಡಳಿಯನ್ನು (ಎಂಡಬ್ಲ್ಯೂಡಿಟಿ) ರಚಿಸಿತು. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳ ವಾದಗಳನ್ನು ಆಲಿಸಿದ ಎಂಡಬ್ಲ್ಯೂಡಿಟಿ ಆಗಸ್ಟ್ 14, 2018ರಂದೇ ತೀರ್ಪು ನೀಡಿದೆ. ಯೋಜನೆಗೆ ಈಗ ಸಿಡಬ್ಲ್ಯೂಸಿ ಒಪ್ಪಿಗೆ ದೊರೆತಿರುವುದು ಡಬಲ್ ಎಂಜಿನ್ ಸರ್ಕಾರದ ಸಾಮರ್ಥ್ಯ ಎಂಬ ಬಿಜೆಪಿಯ ವಾದವು ನಿಜವೇ ಆಗಿದ್ದರೆ, ಜುಲೈ 26, 2019ರಂದು ಸಮ್ಮಿಶ್ರ ಸರ್ಕಾರವನ್ನು ಕೆಳಗಿಳಿಸಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗಲೇ ಯೋಜನೆಗೆ ಸಿಡಬ್ಲ್ಯೂಸಿ ಒಪ್ಪಿಗೆ ನೀಡಬೇಕಿತ್ತು. ಚುನಾವಣೆ ಸಮೀಪಿಸುವವರೆಗೆ ಕಾಯುವ ಅಗತ್ಯವೇನಿತ್ತು?” ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.

- Advertisement -


ಮಹದಾಯಿ ಹೋರಾಟಗಾರರು ಹಾಗೂ ಆಮ್ ಆದ್ಮಿ ಪಾರ್ಟಿ ಮುಖಂಡರಾದ ವಿಕಾಸ್ ಸೊಪ್ಪಿನ್ ಮಾತನಾಡಿ, “ಬಿಜೆಪಿಯು ಈ ವಿಚಾರದಲ್ಲಿ ಬೀಗಬೇಕಾದ ಅಗತ್ಯವಿಲ್ಲ. ಬದಲಾಗಿ, ಈ ಯೋಜನೆಯಿಂದ ಅನುಕೂಲ ಪಡೆಯಬಹುದಾದ ಹುಬ್ಬಳ್ಳಿ-ಧಾರವಾಡ, ನರಗುಂದ, ನವಲಗುಂದ, ಬಾದಾಮಿ, ರೋಣ, ಗದಗ ಹಾಗೂ ಸುಮಾರು 100 ಗ್ರಾಮಗಳಿಗೆ ಶೀಘ್ರವೇ ಕುಡಿಯುವ ನೀರು ಒದಗಿಸಲು ಗಂಭೀರ ಪ್ರಯತ್ನ ಮಾಡಲಿ. ಆಮ್ ಆದ್ಮಿ ಪಾರ್ಟಿಯು ಭಾಷೆ, ಸಂಸ್ಖೃತಿ, ಗಡಿ ಹಾಗೂ ನೀರಿನ ಹಕ್ಕಿಗೆ ಸಂಬಂಧಿಸಿ ರಾಜ್ಯ ಹಿತಾಸಕ್ತಿಗೆ ಸದಾ ಬದ್ಧವಾಗಿದೆ” ಎಂದು ಹೇಳಿದರು.

ಭ್ರಷ್ಟರ ರಕ್ಷಣೆ, ಭ್ರಷ್ಟಾಚಾರ ವಿರೋಧಿಗಳ ದಮನ:
“2022ರ ಏಪ್ರಿಲ್ನಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್’ರವರು ಆಗ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ನಂತರ ಡಿಸೆಂಬರ್ 31ರಂದು ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಪ್ರಸಾದ್ ತುಮಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. 2023ರ ಜನವರಿ 1ರಂದು ಉದ್ಯಮಿ ಪ್ರಸಾದ್’ರವರು ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಗಳಲ್ಲಿ ಸಚಿವ ಹಾಗೂ ಶಾಸಕರನ್ನು ಪೊಲೀಸರು ಬಂಧಿಸಿಲ್ಲ. ಆದರೆ ಸರ್ಕಾರದ ಕಮಿಷನ್ ದಂಧೆಯನ್ನು ಬಹಿರಂಗಪಡಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ 84 ವರ್ಷದ ಕೆಂಪಣ್ಣರವರನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟರಿಗೆ ರಕ್ಷಣೆಯಿದೆ, ಭ್ರಷ್ಟಾಚಾರ ವಿರೋಧಿಗಳಿಗೆ ರಕ್ಷಣೆಯಿಲ್ಲ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ವಲಯ ಸಂಯೋಜಕ ಹಾಗೂ ವಕೀಲರಾದ ರವಿಚಂದ್ರ ನೆರ್ಬೆಂಚಿ ಮತ್ತಿತರರು ಭಾಗವಹಿಸಿದ್ದರು.

Join Whatsapp