ಬೆಳಗಾವಿ: ದೇಶದ ಉಳಿವಿಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಬೇಡಿ. ಎಂದು ಇಲ್ಲಿನ ಗಾಂಧಿ ಭವನದಲ್ಲಿ ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ‘ದೇಶ ಉಳಿಸಿ ಸಂಕಲ್ಪ ಸಮಾವೇಶ’ದಲ್ಲಿ ಕರೆ ನೀಡಲಾಗಿದೆ.
ಜನರಿಗೆ ಅಚ್ಛೆ ದಿನ ಆಸೆ ತೋಧರಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರ ಸೂಲಿಗೆಗೆ ನಿಂತಿದೆ. ಅಗತ್ಯ ವಸ್ತುಗಳ ಬೆಲೆ ಏರಿಸಿ, ಸಾಮಾನ್ಯರ ದುಡಿಮೆಯನ್ನೆಲ್ಲ ದೋಚುತ್ತಿದೆ. ಆದರೆ, ದೊಡ್ಡ ಕಂಪನಿಗಳಿಗೆ ದೇಶದ ಕೊಳ್ಳೆ ಹೊಡೆಯಲು ಮುಕ್ತ ಪರವಾನಗಿ ನೀಡಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಮಾವೇಶದ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.
ಯೂಸುಫ್ ಖನ್ನಿ ಮಾತನಾಡಿ, ಬಿಜೆಪಿ ಸೋಲಿಸುವುದೇ ಸಂಕಲ್ಪ ಯಾತ್ರೆ ಉದ್ದೇಶ. ಬಿಜೆಪಿಗೆ ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಭಗತ್ ಸಿಂಗ್ ಎಂದರೆ ಆಗುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಲಿದೆ ಎಂದರು.
ಮೂರು ಪ್ರತ್ಯೇಕ ಮಾರ್ಗಗಳಲ್ಲಿ ಸಂಚರಿಸುತ್ತಿರುವ ‘ದೇಶ ಉಳಿಸಿ ಸಂಕಲ್ಪ’ ಯಾತ್ರೆ ಸೋಮವಾರ ಬೆಳಗಾವಿ ಪ್ರವೇಶಿಸಿದೆ. ಈ ಸಂದರ್ಭ ಅಂಬೇಡ್ಕರ್ ಉದ್ಯಾನದಿಂದ ಗಾಂಧಿ ಭವನದವರೆಗೆ ಮೆರವಣಿಗೆ ನಡೆಯಿತು.