ಕಲಬುರಗಿ: ನಾನು ಸೆಟಲ್ ಆಗಿದ್ದೇನೆ. ರಾಧಾಕೃಷ್ಣ ಅವರ ಸೆಟಲ್ ಮಾಡುವ ಬಗ್ಗೆ ಕಲಬುರಗಿ ಜನರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ, ಚಿಕ್ಕಮಗಳೂರಿನ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಪಕ್ಷದಲ್ಲಿಯೂ ಯಾವುದೇ ಹುದ್ದೆ ಹೊಂದಿಲ್ಲ. ನಮ್ಮ ಸೆಟಲ್ ಬಗ್ಗೆ ಯೋಚಿಸದೆ ನೀವು ಸೆಟಲ್ ಆಗುವ ಬಗ್ಗೆ ಯೋಚಿಸಿ ಎಂದು ಸಿ.ಟಿ.ರವಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಸೆಟಲ್ ಆಗಿದ್ದಾರೆ. ಈಗ ಅಳಿಯನನ್ನು ಸೆಟಲ್ ಮಾಡಲು ಖರ್ಗೆ ಅವರು ಕಣ್ಣೀರು ಹಾಕಿದ್ದಾರೆ ಎಂದು ಸಿ.ಟಿ ರವಿ ಹೇಳಿದ್ದರು.
ಯಡಿಯೂರಪ್ಪ ಹಾಗೂ ಅವರ ಮಗನಿಂದ ಬಿಜೆಪಿಯನ್ನು ಸ್ವಚ್ಛಗೊಳಿಸಲು ಹೋರಾಡುವುದಾಗಿ ಯತ್ನಾಳ ಹಾಗೂ ಈಶ್ವರಪ್ಪ ಹೇಳುತ್ತಿದ್ದಾರೆ. ಅವರನ್ನು ನೋಡಿ, ಅವರಂತೆ ಮಾತನಾಡುವುದನ್ನು ಕಲಿಯಿರಿ. ಮೊದಲೇ ಜನರು ನಿಮ್ಮನ್ನು ಪುಕ್ಕಲ ಎನ್ನುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಸಿಟಿ ರವಿಗೆ ಹೇಳಿದ್ದಾರೆ.
ಸಾಮಾನ್ಯ ದಲಿತನಿಗೆ ಟಿಕೆಟ್ ನೀಡಬೇಕಿತ್ತು ಎಂದು ಸಿ.ಟಿ ರವಿ ಹೇಳಿರುವ ಕುರಿತು ಹೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ತೇಜಸ್ವಿ ಸೂರ್ಯ ಹಾಗೂ ಜಗದೀಶ್ ಶೆಟ್ಟರ್ ಬದಲು ಸಾಮಾನ್ಯ ಬ್ರಾಹ್ಮಣ, ಲಿಂಗಾಯತನಿಗೆ ಟಿಕೆಟು ಕೊಡಬೇಕಿತ್ತಲ್ಲ. ಇನ್ನೂ ಚುನಾವಣೆಗೆ ಪ್ರಚಾರ ಕೊನೆಗೊಳ್ಳಲು ಐದು ಆರು ದಿನವಿದೆ. ಬಿಜೆಪಿ ನಾಯಕರು ನಮ್ಮ ಹಾಗೂ ನಮ್ಮ ಕುಟುಂಬದ ಮೇಲೆ ಹೀಗೆ ವೈಯಕ್ತಿಕ ದಾಳಿ ಮಾಡುತ್ತಾರೆ. ನಾವೂ ಕೂಡ ಅಂತಹ ಮಾತುಗಳಿಗೆ ಸೂಕ್ತ ಉತ್ತರ ಕೊಡಬೇಕಾಗುತ್ತದೆ ಎಂದು ಮಾರುತ್ತರ ನೀಡಿದರು.