ನನ್ನ ಹುಟ್ಟುಹಬ್ಬಕ್ಕೆ ಯಾರೂ ಬ್ಯಾನರ್ ಹಾಕಬೇಡಿ: ಅಭಿಮಾನಿಗಳಲ್ಲಿ ನಟ ಯಶ್ ಮನವಿ

Prasthutha|

ಸೂರಣಗಿ: ನಟ ಯಶ್ ಅವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರೋ ಮೂವರು ಅಭಿಮಾನಿಗಳ ಕುಟುಂಬಕ್ಕೆ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಇದೇ ವೇಳೆ, ಇನ್ಮುಂದೆ ನನ್ನ ಬ್ಯಾನರ್ ಎಲ್ಲೂ ಕಟ್ಟಬೇಡಿ, ಎಲ್ಲಿಯೂ ಕಟೌಟ್ ಹಾಕಬೇಡಿ ಎಂದು ಫ್ಯಾನ್ಸ್ ಗೆ ಯಶ್ ಮನವಿ ಮಾಡಿದ್ದಾರೆ.

- Advertisement -


ಮೂವರು ಅಭಿಮಾನಿಗಳ ಸಾವಿನ ವಿಷಯ ತಿಳಿದ ಕೂಡಲೇ ತಾವಿದ್ದ ಜಾಗದಿಂದ ಹುಬ್ಬಳ್ಳಿಗೆ ಬಂದು, ಅಲ್ಲಿಂದ ಸೂರಣಗಿ ಹಳ್ಳಿಗೆ ರಸ್ತೆ ಮಾರ್ಗದ ಮೂಲಕ ತೆರಳಿದ ಯಶ್, ಮೃತರ ಮನೆಗಳಿಗೆ ಹೋಗಿ ಅವರ ಸಂಬಂಧಿಕರಿಗೆ ಸಾಂತ್ವನ ಹೇಳಿದರು.
ತದನಂತರ ತಮ್ಮನ್ನು ಸುತ್ತುವರಿದ ಮಾಧ್ಯಮಗಳೊಂದಿಗೆ ಬೇಸರದಿಂದಲೇ ಪ್ರತಿಕ್ರಿಯೆ ನೀಡಿದ ಅವರು, “ನನ್ನ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುವುದೆಲ್ಲಾ ನನಗೆ ಇಷ್ಟವಿಲ್ಲ. ಹುಟ್ಟುಹಬ್ಬದ ದಿನ ಹೀಗೆಲ್ಲಾ ಆಗುತ್ತೆ ಅನ್ನೋದಾದ್ರೆ ಇಂಥ ಆಡಂಬರಗೆಲ್ಲಾ ಬೇಡವೇ ಬೇಡ. ಹೀಗೆಲ್ಲಾ ಆದರೆ, ನನ್ನ ಹುಟ್ಟುಹಬ್ಬ ಪ್ರತಿ ವರ್ಷ ಯಾಕಾದ್ರೂ ಬರುತ್ತೋ ಅಂತ ಬೇಸರವಾಗುತ್ತೆ. ದಯವಿಟ್ಟು ನನ್ನ ಮೇಲೆ ನಿಮಗೆ (ಅಭಿಮಾನಿಗಳಿಗೆ) ಗೌರವವಿದ್ದರೆ ದಯವಿಟ್ಟು ಸರಳವಾಗಿ ನನ್ನ ಹುಟ್ಟುಹಬ್ಬ ಆಚರಿಸಿ’’ ಎಂದು ಅವರು ಮನವಿ ಮಾಡಿದರು.



Join Whatsapp