ರೈತರ ಗೋಜಿಗೆ ಹೋಗುವುದು ಸೂಕ್ತವಲ್ಲ: ಕೇಂದ್ರ ಸರ್ಕಾರವನ್ನು ಮತ್ತೆ ಎಚ್ಚರಿಸಿದ ಮೇಘಾಲಯ ರಾಜ್ಯಪಾಲ

Prasthutha|

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಯ ಕುರಿತು ಆಗಾಗ್ಗೆ ವಿಮರ್ಶಿಸುತ್ತಿದ್ದ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್, ಪ್ರಸಕ್ತ ಇದೀಗ ಮತ್ತೆ ರೈತರ ಗೋಜಿಗೆ ಹೋಗದಂತೆ ಮೋದಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

- Advertisement -


ರಾಜಸ್ಥಾನದ ಜೋದ್’ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಮೋದಿ ಸರ್ಕಾರ ರೈತರ ಗೋಜಿಗೆ ಹೋಗಬಾರದು ಎಂಬುದು ನನ್ನ ಸಲಹೆ. ರೈತರು ದೇಶದಲ್ಲೇ ಅಪಾಯಕಾರಿಯಾಗಿದ್ದು, ತಮ್ಮ ಹಕ್ಕುಗಳನ್ನು ಮಾತುಕತೆಯ ಅಥವಾ ಹೋರಾಟದ ಮೂಲಕ ಪಡೆಯುವಷ್ಟು ಶಕ್ತರಾಗಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಹಿಂಸಾತ್ಮಕ ಮಾರ್ಗವನ್ನೂ ಅನುಸರಿಸಲು ಹಿಂದೆ ಸರಿಯುವುದಿಲ್ಲ ಎಂದು ಅವರು ಸಾಂದರ್ಭಿಕವಾಗಿ ನುಡಿದರು.

ಈ ಹಿಂದೆ ಕೇಂದ್ರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಆಯೋಜಿಸಿದ ಪ್ರತಿಭಟನೆಯ ಎದುರು ಶರಣಾಗಿದ್ದ ಮೋದಿ ಸರ್ಕಾರ ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸಿತ್ತು.

- Advertisement -

ಬಿಹಾರ, ಗೋವಾ ಮತ್ತು ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಸತ್ಯಪಾಲ್ ಮಲಿಕ್, ರೈತರ ಸಂಕಷ್ಟಕ್ಕೆ ಧ್ವನಿ ಎತ್ತಿದ್ದಕ್ಕಾಗಿ ಹುದ್ದೆಯನ್ನು ತ್ಯಜಿಸಬೇಕಾಗಿ ಬಂದರೂ ಅದರಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಈ ಹಿಂದೆ ಘೋಷಿಸಿದ್ದರು.

ಈ ಮಧ್ಯೆ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಕಳೆದ ಡಿಸೆಂಬರ್’ನಲ್ಲಿ ಸತ್ಯಪಾಲ್ ಮಲಿಕ್ ಮೋದಿ ಸರ್ಕಾರಕ್ಕೆ ಸೂಚಿಸಿದ್ದರು. ಇದಕ್ಕೆ ಮೋದಿ ಸರ್ಕಾರ ಒಪ್ಪಿದ್ದು, ಈ ಹಿನ್ನೆಲೆಯಲ್ಲಿ 13 ತಿಂಗಳ ಸುದೀರ್ಘ ಪ್ರತಿಭಟನೆಯನ್ನು ರೈತರು ಹಿಂಪಡೆದಿದ್ದರು.

ರೈತರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸಲು ರೈತರಿಗೆ ಸರಿಯಾಗಿ ತಿಳಿದಿದೆ. ಅವರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ಆರಂಭಿಸುತ್ತಾರೆ ಎಂದು ಸತ್ಯಪಾಲ್ ಮಲಿಕ್ ಎಚ್ಚರಿಸಿದ್ದಾರೆ.

Join Whatsapp