ಘೋಷಣೆಗಳ ಅಬ್ಬರದಲ್ಲಿ ಸಂತ್ರಸ್ತರ ಅಳಲು ಲೀನವಾಗದಿರಲಿ

Prasthutha|

ಎಫ್. ನುಸೈಬಾ, ಕಲ್ಲಡ್ಕ

- Advertisement -


ಮಾರ್ಚ್ 8, ವಿಶ್ವ ಮಹಿಳಾ ದಿನವಾಗಿ ಆಚರಿಸಲಾಗುತ್ತದೆ. ಸಮಾನ ಹಕ್ಕುಗಳಿಗಾಗಿ ಆಗ್ರಹಿಸಿ ರೂಪುಗೊಂಡ ಹೋರಾಟದ ಹಾದಿಯು ಮುಂದೆ ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆಗೆ ಪ್ರೇರಣೆಯಾಯಿತು. ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗೈದ ಮಹಿಳಾ ಮಣಿಗಳನ್ನು ಗುರುತಿಸಿ ಸನ್ಮಾನಿಸುವುದು, ಪ್ರೋತ್ಸಾಹಿಸುವುದು ಪ್ರಸ್ತುತ ಮಹಿಳಾ ದಿನಾಚರಣೆಗಳ ವೈಶಿಷ್ಟ್ಯವಾಗಿದೆ. ನಿಜಕ್ಕೂ ಇದು ಶ್ಲಾಘನೀಯ ಕಾರ್ಯ.


ಸಾಧಕಿಯಾದ ನಂತರ ಗುರುತಿಸಲ್ಪಡುವ ಹೆಣ್ಣು ತನ್ನ ಸಾಧನೆಯ ಹಾದಿಯಲ್ಲಿ ಎದುರಿಸುವ ಕಷ್ಟ, ಅನುಭವಿಸುವ ಯಾತನೆಗಳನ್ನು ಬಿಚ್ಚಿಟ್ಟಾಗಲೇ ಅರಿವಾಗುವುದು ಅವುಗಳ ಮುಂದೆ ಈ ಪ್ರಶಸ್ತಿ ಪುರಸ್ಕಾರಗಳು ಏನೇನೂ ಅಲ್ಲವೆಂದು. ಇದಕ್ಕೆ ಉತ್ತಮ ನಿದರ್ಶನ ಹೈದರಾಬಾದಿನ ಸಯೀದಾ ಸಲ್ವಾ ಫಾತಿಮಾ. ನಲ್ಲಿ ನೀರಿಗೂ ತತ್ವಾರ ಪಡುವ ಗ್ರಾಮದಲ್ಲಿ ಬೆಳೆದು ಬಂದು ಆರ್ಥಿಕ ಸಂಕಷ್ಟದಿಂದ ಪ್ರಾಥಮಿಕ ಶಿಕ್ಷಣವನ್ನು ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಿದ್ದ ಅವರು, ಈಗ ಯಶಸ್ವಿ ಪೈಲಟ್ ಆಗಿ ಮಿಂಚುತ್ತಿದ್ದಾರೆ. ಸಲ್ವಾರಂತೆ ಸಾಧನೆಯ ಶಿಖರವೇರಿದ ಹಲವು ಮಹಿಳೆಯರ ಯಶೋಗಾಥೆ ನಮ್ಮ ಕಣ್ಣ ಮುಂದಿದೆ. ಸ್ವ ಪರಿಶ್ರಮದ ಮೂಲಕ ಯಶಸ್ಸಿನ ಗುರಿ ತಲುಪಿದ ಇಂತಹ ಸಾಧಕಿಯರನ್ನು ಸನ್ಮಾನಿಸುವ, ಗೌರವಿಸುವ ಭರದಲ್ಲಿ ಜಾತೀಯತೆಯ ಜ್ವಾಲೆಗೆ ಕಮರಿ ಹೋದ (ಹೋಗುತ್ತಿರುವ) ಕುಸುಮಗಳನ್ನು ನಾವು ಮರೆಯುವಂತಿಲ್ಲ. ಭೇಟಿ ಬಚಾವೋ ಭೇಟಿ ಪಡಾವೊ ಅಭಿಯಾನದ ಅಬ್ಬರದ ಪ್ರಚಾರದ ಮಧ್ಯೆಯೇ ಶಿರವಸ್ತ್ರದ ನೆಪವೊಡ್ಡಿ ಮುಸ್ಲಿಂ ವಿಧ್ಯಾರ್ಥಿನಿಯರನ್ನು ವಿದ್ಯಾಲಯದಿಂದ ಹೊರತಂದು ಬೀದಿಯಲ್ಲಿ ನಿಲ್ಲಿಸಿದ ನಮ್ಮ ಆಡಳಿತ ವ್ಯವಸ್ಥೆ… ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನುವನ್ನು ಅತ್ಯಂತ ಅಮಾನುಷವಾಗಿ ಅತ್ಯಾಚಾರಗೈದು, ಆಕೆಯ ಕಣ್ಣ ಮುಂದೆಯೇ ಆಕೆಯ ಕುಟುಂಬದ ಏಳು ಸದಸ್ಯರನ್ನು ಕ್ರೂರವಾಗಿ ಕೊಂದ ಹನ್ನೊಂದು ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸಿ ಹೂಹಾರ ಹಾಕಿ ಸ್ವಾಗತಿಸುವ ನಮ್ಮ ಪ್ರಭುತ್ವದ ರಾಜಕೀಯ ವ್ಯವಸ್ಥೆ … ಹತ್ರಾಸ್’ನಲ್ಲಿ ಹದಿನೈದರ ಹರೆಯದ ದಲಿತ ಬಾಲಕಿಯನ್ನು ಮೇಲ್ಜಾತಿ ಯುವಕರು ಅತ್ಯಾಚಾರಗೈದು ಕೊಂದಾಗ, ಆಕೆಯ ಮೃತದೇಹದ ಅಂತ್ಯಸಂಸ್ಕಾರಕ್ಕೂ ಕುಟುಂಬಿಕರಿಗೆ ಅವಕಾಶ ಕಲ್ಪಿಸದೆ ಸ್ವತಃ ಭಸ್ಮಗೊಳಿಸಿ ಇದೀಗ ಯಾವುದೇ ಸಾಕ್ಷ್ಯಾಧಾರವಿಲ್ಲವೆಂದು ಆರೋಪಿಗಳನ್ನು ಬಿಡುಗಡೆಗೊಳಿಸಿದ ನಮ್ಮ ನ್ಯಾಯ ವ್ಯವಸ್ಥೆ… ಈ ರೀತಿಯ (ಅ)ವ್ಯವಸ್ಥೆಗಳ ವಿರುದ್ಧ ಹೋರಾಡುತ್ತಿರುವ ಸಂತ್ರಸ್ತರಿಗೆ ನ್ಯಾಯ ಲಭಿಸುವವರೆಗೆ, ಸಮಾನತೆಗಾಗಿ ಮೊರೆಯಿಡುತ್ತಿರುವ ಪ್ರತಿಯೋರ್ವ ಹೆಣ್ಣಿಗೆ ಆಕೆಯ ಸಂವಿಧಾನಾತ್ಮಕ ಹಕ್ಕುಗಳು ಮರಳಿ ಸಿಗುವವರೆಗೆ ಮಹಿಳಾ ದಿನಾಚರಣೆಗಳು ಅರ್ಥಪೂರ್ಣವಾಗದು ಎಂಬುವುದು ಕಹಿ ಸತ್ಯ. ತನ್ನ ಅಸ್ತಿತ್ವಕ್ಕಾಗಿ ಘನತೆಗಾಗಿ ಆತ್ಮಾಭಿಮಾನಕ್ಕಾಗಿ ಬೀದಿಗಿಳಿದು ಹೋರಾಡಬೇಕಾದ ಪರಿಸ್ಥಿತಿ ನಿರ್ಮೂಲನೆಯಾಗುವ ದಿನವಾಗಿದೆ ನಿಜಾರ್ಥದಲ್ಲಿ ಮಹಿಳಾ ದಿನ.

Join Whatsapp