ಮಂಗಳೂರು : ಉಡುಪಿ ಬಳಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಗೆ ಮಾನಸಿಕ ಅಸ್ವಸ್ಥನ ಪಟ್ಟ ಕಟ್ಟಿ ಪ್ರಕರಣವನ್ನು ಮುಗಿಸಬೇಡಿ ಎಂದು ಎಸ್ಡಿಪಿಐ ರಾಜ್ಯ ಮುಖಂಡ ರಿಯಾಝ್ ಕಡಂಬು ಹೇಳಿದ್ದಾರೆ.
ಬಂಧಿತ ಆರೋಪಿ ಪ್ರವೀಣ್ ಚೌಗಲೆ ಸರಕಾರಿ ಅಧಿಕಾರಿಯೊಬ್ಬರ ಮನೆಯಲ್ಲೇ ಅಡಗಿ ಕೂತಿರುವುದರಿಂದ ರಾಜಕೀಯ ಮತ್ತು ಆಡಳಿತ ವರ್ಗದ ಪ್ರಭಾವ ಬಳಸುವ ಸಾಧ್ಯತೆ ಎದ್ದು ಕಾಣುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿರುವ ಅವರು ನಿವೃತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಸರಕಾರ ನಿಷ್ಪಕ್ಷಪಾತ ತನಿಖೆಗೆ ಉನ್ನತ ಮಟ್ಟದ ತಂಡ ರಚಿಸಬೇಕು ಎಂದು ಮನವಿ ಮಾಡಿದರು.
ಆರೋಪಿಗೆ ಮಾನಸಿಕ ಅಸ್ವಸ್ಥನ ಪಟ್ಟ ಕಟ್ಟಿ ಕೇಸು ಮುಗಿಸಬೇಡಿ ಎಂದು ರಿಯಾಝ್ ಕಡಂಬು ಕೇಳಿಕೊಂಡಿದ್ದಾರೆ.
ಕಳೆದ ಭಾನುವಾರ ಉಡುಪಿ ಬಳಿಯ ನೇಜಾರು ಎಂಬಲ್ಲಿ ಒಂದೇ ಮನೆಯ ನಾಲ್ವರ ಹತ್ಯೆ ನಡೆದಿತ್ತು. ತಾಯಿ ಮತ್ತು ಮೂವರು ಮಕ್ಕಳನ್ನು ಇರಿದು ಕೊಲೆ ಮಾಡಿ ಹಂತಕ ಪರಾರಿಯಾಗಿದ್ದ.
ಇಂದು ಪೊಲೀಸರು ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಪ್ರವೀಣ್ ಚೌಗಲೆ CISF ಸಿಬ್ಬಂದಿಯಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.