ಬೆಂಗಳೂರು: ಸುದ್ದಿಗಳ ವೈಭವೀಕರಣ ಮಾಡಬೇಡಿ. ವಾಸ್ತವ ಸಂಗತಿಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಮನಗರ ಜಿಲ್ಲಾ ಘಟಕವು ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗ ಸಮಾಜದ ವೇಗ ಮಾಧ್ಯಮಕ್ಕಿಂತಲೂ ಹೆಚ್ಚಾಗಿದೆ. ಸಿಟಿಜನ್ ಜರ್ನಲಿಸಂ ಎಂಬ ಪರಿಕಲ್ಪನೆ ಆರಂಭವಾಗಿದ್ದು, ಹಳ್ಳಿಯಲ್ಲಿರುವ ಹುಡುಗ ತಮ್ಮ ವಿಚಾರವನ್ನು ತಾನೇ ವಿಡಿಯೋ ಮಾಡಿ ಪೋಸ್ಟ್ ಮಾಡುವ ವ್ಯವಸ್ಥೆ ಸೃಷ್ಟಿಯಾಗಿದೆ. ಹಾಗಾಗಿ ಮಾಧ್ಯಮಗಳಲ್ಲಿ ಸ್ಪರ್ಧೆ ಹೆಚ್ಚಾಗಿದೆ ಎಂದರು.
ಟಿವಿ ಮತ್ತು ಯೂಟೂಬ್ ಚಾನೆಲ್ ಗಳು ಹೆಚ್ಚಾಗಿದ್ದು, ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾಮಾಣಿಕವಾಗಿರುವ ಮಾಧ್ಯಮಗಳಿಗೆ ಸಮಾಜ ಗೌರವ ನೀಡುತ್ತದೆ. ಹೀಗಾಗಿ ನೀವು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.