ಬಂಟ್ವಾಳ: ಗಣೇಶೋತ್ಸವ ಹಾಗೂ ಪ್ರವಾದಿ ಮುಹಮ್ಮದರ ಜನ್ಮದಿನದ ರ್‍ಯಾಲಿಗಳ ವೇಳೆ ದ.ಕ ಜಿಲ್ಲೆಯ ಹಲವಾರು ಕಡೆಗಳಲ್ಲಿ ಹಿಂದೂ-ಮುಸ್ಲಿಮರ ಸೌಹಾರ್ದತೆಯ ದ್ಯೋತಕವಾಗಿ ಪರಸ್ಪರರು ಸಿಹಿ ತಿಂಡಿ-ಪಾನೀಯ ಹಂಚುವುದು ಸಾಮಾನ್ಯವಾಗಿದೆ.
ಆದರೆ, ಬಂಟ್ವಾಳ ತಾಲೂಕಿನ ಬೋಳಂತೂರಿನ ಸಮೀಪ ಇರುವ ತುಳಸೀವನ ಶ್ರೀ ಸಿದ್ದಿ ವಿನಾಯಕ ಭಜನಾ ಮಂದಿರವು ಮಸೀದಿಯ ಆಡಳಿತ ಮಂಡಳಿಗೆ ಪತ್ರ ಬರೆದಿದ್ದು, ಗಣೇಶೋತ್ಸವ ಶೋಭಾಯಾತ್ರೆ ವೇಳೆ ಪಾನೀಯ, ಸಿಹಿತಿಂಡಿ ನೀಡಬೇಡಿ ಎಂದು ಮನವಿ ಮಾಡಿದೆ.
ಈ ಪತ್ರವನ್ನು ಸ್ಥಳೀಯ ಮಸೀದಿಯ ಆಡಳಿತ ಕಮಿಟಿಗೆ ಕಳೆದ ಗುರುವಾರ(ಸೆ.5)ರಂದು ತಲುಪಿಸಿರುವುದಾಗಿ ತಿಳಿದು ಬಂದಿದೆ.
ವೈರಲಾಗಿರುವ ಪತ್ರದಲ್ಲಿ, “ಕಳೆದ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗ್ರತೆಗಾಗಿ ತಮ್ಮಲ್ಲಿ ಮನವಿ ಮಾಡುವುದೇನೆಂದರೆ, ಇನ್ನು ಮುಂದಕ್ಕೆ ಶೋಭಾ ಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ” ಎಂದು ಉಲ್ಲೇಖಿಸಲಾಗಿದೆ.
ಪತ್ರ ಕಳೆದ ಗುರುವಾರ ನಮ್ಮ ಮಸೀದಿಗೆ ಬಂದಿದೆ. ನಾವು ಕಳೆದ ವರ್ಷ ಮಸೀದಿ ಕಮಿಟಿಯ ವತಿಯಿಂದ ಯಾವುದೇ ತಿಂಡಿಯಾಗಲೀ, ಪಾನೀಯವಾಗಲೀ ಶೋಭಾಯಾತ್ರೆಯ ವೇಳೆ ನೀಡಿರಲಿಲ್ಲ. ಊರಿನ ಕೆಲವು ಯುವಕರು ತಮ್ಮ ಕೈಯಿಂದ ಹಣ ಹಾಕಿ, ಐಸ್ ಕ್ರೀಂ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು” ಎಂದು ಮಸೀದಿ ಕಮಿಟಿಯ ಅಧ್ಯಕ್ಷರಾದ ಮುಹಮ್ಮದ್ ತಿಳಿಸಿದ್ದಾರೆ.
ಮಕ್ಕಳು ಅಸ್ವಸ್ಥರಾಗಿದ್ದ ವಿಚಾರ ಏನಾದರೂ ಮಸೀದಿಯವರ ಗಮನಕ್ಕೆ ತಂದಿದ್ದರೇ ಎಂದು ಕೇಳಿದಾಗ, “ಇಲ್ಲ. ನಮಗೆ ಯಾವುದೇ ಮಾಹಿತಿ ಭಜನಾ ಮಂದಿರದ ಕಡೆಯಿಂದಾಗಲೀ, ಅಸ್ವಸ್ಥರಾಗಿದ್ದರು ಎನ್ನಲಾಗಿರುವ ಮಕ್ಕಳ ಪೋಷಕರಾಗಲೀ ತಿಳಿಸಿಲ್ಲ ಎಂದು ಹೇಳಿದ್ದಾರೆ.