ದಾನದ ಉದ್ದೇಶ ಮತಾಂತರವಾಗಬಾರದು, ಆಮಿಷವೊಡ್ಡುವುದು ಅಪಾಯಕಾರಿ: ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಬಲವಂತದ ಧಾರ್ಮಿಕ ಮತಾಂತರದ ವಿಷಯವು “ಅತ್ಯಂತ ಗಂಭೀರ” ವಿಷಯವಾಗಿದೆ ಎಂದು ಒತ್ತಿ ಹೇಳಿದ ಸುಪ್ರೀಂ ಕೋರ್ಟ್, ದಾನವು ಸ್ವಾಗತಾರ್ಹವಾಗಿದ್ದರೂ, ಅದರ ಉದ್ದೇಶವು ಮತಾಂತರವಾಗಿರಬಾರದು. ಮತಾಂತರಕ್ಕಾಗಿ ನಡೆಸುವ ಪ್ರಲೋಭನೆಯು ಅತ್ಯಂತ ಅಪಾಯಕಾರಿ ಎಂದು ಹೇಳಿದೆ.

- Advertisement -

ಧಾರ್ಮಿಕ ಮತಾಂತರದ ವಿರುದ್ಧ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಸಿ.ಟಿ. ರವಿಕುಮಾರ್ ದ್ವಿಸದಸ್ಯ ಪೀಠವು ಈ ಅಭಿಪ್ರಾಯವ್ಯಕ್ತಪಡಿಸಿದೆ.

‘ದಾನ–ಧರ್ಮ ಹಾಗೂ ಉತ್ತಮ ಕೆಲಸಗಳು ಸ್ವಾಗತಾರ್ಹವಾದುವು. ಆದರೆ ಅವುಗಳ ಉದ್ದೇಶ ಏನು ಎಂಬುದನ್ನು ಮನಗಾಣಬೇಕು. ನಂಬಿಕೆ ಬೇರೆ, ಮತಾಂತರಕ್ಕಾಗಿ ಇಲ್ಲ ಸಲ್ಲದ ಆಸೆ ತೋರಿಸುವುದು ಅಪಾಯಕಾರಿ’ ಎಂದು ನ್ಯಾಯಪೀಠ ತಿಳಿಸಿದೆ.

- Advertisement -

‘ತಮಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಅದು ಪ್ರಲೋಭನೆಯಿಂದ ಕೂಡಿರಬಾರದು. ನಿರ್ದಿಷ್ಟ ವ್ಯಕ್ತಿಗೆ ಸಹಾಯ ಮಾಡಬೇಕು ಎಂದು ಅನಿಸಿದರೆ ಸಹಾಯ ಮಾಡಿ. ಆದರೆ ಅದರ ಉದ್ದೇಶ ಮತಾಂತರ ಆಗಿರಬಾರದು. ಆಸೆ ತೋರಿಸುವುದು ಅಪಾಯಕಾರಿ. ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದುದು. ಭಾರತದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ದೇಶದ ಸಂಸ್ಕೃತಿ ಹಾಗೂ ಸಾಮರಸ್ಯಕ್ಕೆ ಅನುಗುಣವಾಗಿಯೇ ಕಾರ್ಯನಿರ್ವಹಿಸುವುದು ಅತ್ಯಗತ್ಯ’ ಎಂದು ನ್ಯಾಯಪೀಠ ಹೇಳಿದೆ.

ಮತಾಂತರ ನಿಷೇಧ ಕಾಯ್ದೆಯ ಕುರಿತು ಎಲ್ಲಾ ರಾಜ್ಯಗಳಿಂದಲೂ ಮಾಹಿತಿ ಪಡೆದು ಸವಿವರವಾದ ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಇದಕ್ಕೆ ಮತ್ತಷ್ಟು ಕಾಲಾವಕಾಶ ನೀಡಬೇಕೆಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದ್ದರು.

ಕಾನೂನುಬಾಹಿರ ಮತಾಂತರ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಕೋರಿ ವಕೀಲ ಅಶ್ವಿನಿಕುಮಾರ್ ಉಪಾಧ್ಯಾಯ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಮೆಹ್ತಾ ಅವರ ಮನವಿ ಪುರಸ್ಕರಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿದೆ.



Join Whatsapp