ಎಲಾನ್ ಮಸ್ಕ್ ಗೆ ಮಹತ್ವದ ಹುದ್ದೆ ನೀಡಿದ ಡೊನಾಲ್ಡ್ ಟ್ರಂಪ್

Prasthutha|

ವಾಷಿಂಗ್ಟನ್: ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಮತ್ತು ಅನಿವಾಸಿ ಭಾರತೀಯ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಅಮೆರಿಕ ಸರ್ಕಾರದ ಕಾರ್ಯಕ್ಷಮತೆ ಮೇಲುಸ್ತುವಾರಿ ಇಲಾಖೆಯನ್ನು ಮುನ್ನಡೆಸಲಿದ್ದಾರೆ ಎಂದು ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

- Advertisement -


‘ಈ ಅದ್ಭುತ ಅಮೆರಿಕನ್ನರು ನನ್ನ ಆಡಳಿತದಲ್ಲಿ ‘ಸೇವ್ ಅಮೆರಿಕ’ ಚಳವಳಿಗೆ ಅಗತ್ಯವಿರುವ ಅಧಿಕಾರಶಾಹಿ ಪ್ರವೃತ್ತಿಯನ್ನು ತೆಗೆದುಹಾಕಲು, ಅನಗತ್ಯ ನಿಯಮಗಳನ್ನು ಕಿತ್ತೊಗೆಯಲು, ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲು ಹಾಗೂ ಫೆಡರಲ್ ಏಜೆನ್ಸಿಗಳನ್ನು ಪುನರ್ ರಚಿಸಲು ನೆರವಾಗುತ್ತಾರೆ’ ಎಂದು ಟ್ರಂಪ್ ಹೇಳಿದ್ದಾರೆ.


‘ರಿಪಬ್ಲಿಕನ್ ಪಕ್ಷ ಈ ಇಲಾಖೆಯ ಬಗ್ಗೆ ಬಹಳ ಸಮಯದಿಂದ ಕನಸು ಕಂಡಿದೆ. ಈ ಇಲಾಖೆಯಲ್ಲಿರುವವರು ಹೊರಗಿನಿಂದ ಸರ್ಕಾರಕ್ಕೆ ಸಲಹೆ, ಮಾರ್ಗದರ್ಶನವನ್ನು ನೀಡುತ್ತಾರೆ. ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆಯನ್ನು ತರಲು ಪ್ರಮುಖ ಪಾತ್ರವಹಿಸುತ್ತಾರೆ. ಎಲಾನ್ ಮತ್ತು ವಿವೇಕ್ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ನೋಡಲು ಎದುರು ನೋಡುತ್ತಿದ್ದೇನೆ’ ಎಂದು ಟಂಪ್ ಹೇಳಿದ್ದಾರೆ.

- Advertisement -


‘ನಮ್ಮ ಆರ್ಥಿಕತೆಯ ಹೊರೆಯನ್ನು ಕಡಿಮೆ ಮಾಡಿ, ‘ಅಮೆರಿಕ ಜನರಿಗಾಗಿ ನಾವು’ ಎನ್ನುವುದನ್ನು ಸಾಬೀತು ಮಾಡುತ್ತಾರೆ ಎನ್ನುವ ನಂಬಿಕೆಯಿದೆ. ಅಮೆರಿಕಕ್ಕೆ ಸ್ವಾತಂತ್ರ್ಯ ದೊರಕಿದ 250ನೇ ವಾರ್ಷಿಕೋತ್ಸವದಂದು ಜನತೆಗೆ ಈ ಇಬ್ಬರು ಉಡುಗೊರೆಯನ್ನು ನೀಡುವಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ಭರವಸೆಯಿದೆ’ ಎಂದು ಟ್ರಂಪ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.



Join Whatsapp