1 ಕಿ.ಮೀ ದೂರದಲ್ಲಿರುವ ಅಗ್ನಿಶಾಮಕ ದಳ ಅವಘಡ ಸ್ಥಳಕ್ಕೆ ತಲುಪಲು ಒಂದು ಗಂಟೆ ಬೇಕಾ? : SDPI ಆಕ್ರೋಶ

Prasthutha|

ಮಂಗಳೂರು: ನಗರದ ಬಂದರ್ ರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ನೂರಾರು ವರ್ಷಗಳ ಇತಿಹಾಸವಿರುವ ಹಾಗೂ ಪ್ರಸ್ತುತ ಏಳು ಕುಟುಂಬಗಳು ವಾಸ ಮಾಡುತ್ತಿರುವ ಪುರಾತನ ಮನೆಯೊಂದು ಆಕಸ್ಮಿಕ ಅಗ್ನಿ ಅವಘಡದಲ್ಲಿ ಹೊತ್ತಿ ಉರಿದ ಪರಿಣಾಮ ಏಳು ಕುಟುಂಬಗಳು ಬೀದಿಗೆ ಬಂದಿವೆ. ಅಗ್ನಿ ಅವಘಡ ಉಂಟಾದ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರೂ, ಕೇವಲ ಒಂದು ಕಿ.ಮೀ ದೂರದಲ್ಲೇ ಅಗ್ನಿಶಾಮಕ ಠಾಣೆಯಿದ್ದರೂ ಒಂದು ಗಂಟೆ ತಡವಾಗಿ ಆಗಮಿಸಿ ತುರ್ತು ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು SDPI ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಸ್ಥಳೀಯರು ಹಲವು ಬಾರಿ ಕರೆ ಮಾಡಿದರು ಅಗ್ನಿಶಾಮಕ ಠಾಣಾ ಸಿಬ್ಬಂದಿ ಕರೆ ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ್ದಾರೆ ಹಾಗೂ ಕೊನೆಗೆ ಸ್ಥಳೀಯರು ಅಗ್ನಿ ಶಾಮಕ ಕಛೇರಿಗೆ ತೆರಳಿ ಸಿಬ್ಬಂದಿ ಮತ್ತು ತುರ್ತು ವಾಹನವನ್ನು ಕರೆದುಕೊಂಡು ಬಂದಿದ್ದಾರೆ. ಅಗ್ನಿ ಶಾಮಕ ದಳದ ತುರ್ತು ಸಂದರ್ಭದ ನಿರ್ಲಕ್ಷ ಖಂಡನೀಯ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು ಆಕ್ರೋಶ ಹೇಳಿದ್ದಾರೆ.

ಹತ್ತು ನಿಮಿಷದ ದಾರಿಯನ್ನು ತಲುಪಲು ತುರ್ತು ವಾಹನಕ್ಕೆ ಒಂದು ಗಂಟೆಗಳ ಕಾಲ ತೆಗೆದುಕೊಂಡಂತಾಗಿದೆ. ಇದು ಯಾವ ತುರ್ತು ಸೇವೆ ಎಂದು ಅವರು ಪ್ರಶ್ನಿಸಿದ್ದಾರೆ‌.

- Advertisement -

ಒಂದು ವೇಳೆ ಕರೆಮಾಡಿದ ಕೂಡಲೇ ಅಗ್ನಿಶಾಮಕ ವಾಹನ ಆಗಮಿಸಿದ್ದರೆ ಹೆಚ್ಚಿನ ಅನಾಹುತ ಆಗದಂತೆ ತಡೆಯಬಹುದಿತ್ತು. ಆದರೆ ತಡವಾದ ಕಾರಣ ಕಟ್ಟಡ ಭಾಗಶಃ ಹಾನಿಯಾಗಿ ಏಳು ಕುಟುಂಬ ಬೀದಿಗೆ ಬೀಳುವಂತಾಗಿದೆ.
ಸರ್ಕಾರ ಹಾಗೂ ಜಿಲ್ಲಾಡಳಿತ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ನೆರವು ನೀಡುವ ಕಾರ್ಯ ಮಾಡಬೇಕು ಹಾಗೂ ತುರ್ತು ಸಂದರ್ಭದಲ್ಲಿ ಕರೆಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ ಅಗ್ನಿ ಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp