ಮುಂಬೈ: ಖ್ಯಾತ ಉದ್ಯಮಿ ರತನ್ ಟಾಟಾ (86) ಬುಧವಾರ ಮಧ್ಯರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ರತನ್ ಟಾಟಾ ಅವರು 28 ಡಿಸೆಂಬರ್ 1937 ರಂದು ಸೂರತ್ ನಲ್ಲಿ ಜನಿಸಿದರು. ವ್ಯಕ್ತಿತ್ವದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಸ್ಥಾಪಿಸಿಕೊಂಡು ಉನ್ನತ ಶಿಖರಗಳನ್ನು ಏರಿದರು. ಅವರು ಟಾಟಾ ಗ್ರೂಪ್ ಆಫ್ ಬಿಸಿನೆಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದರು.
ರತನ್ ಟಾಟಾ ಸಂದರ್ಶನವೊಂದರಲ್ಲಿ ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿ, ಪ್ರೀತಿ ತನ್ನ ಜೀವನದಲ್ಲಿ ಒಂದಲ್ಲ ನಾಲ್ಕು ಬಾರಿ ಬಾಗಿಲು ತಟ್ಟಿದೆ, ಆದರೆ ಕಷ್ಟಕರ ಸಂದರ್ಭಗಳಿಂದ ಅವರ ಸಂಬಂಧವು ಮದುವೆಯ ಹಂತವನ್ನು ತಲುಪಲಿಲ್ಲ. ಇದಾದ ನಂತರ ಮತ್ತೆ ಮದುವೆಯ ಬಗ್ಗೆ ಯೋಚಿಸಲಿಲ್ಲ.
ರತನ್ ಟಾಟಾ ಅವರು ತಮ್ಮ ಬಾಲ್ಯದಿನಗಳಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಯುವತಿಯನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಸಹ ಮದುವೆಯಾಗಲು ಬಯಸಿದ್ದರು. ಆದರೆ ಅದೇ ಸಮಯದಲ್ಲಿ ರತನ್ ಟಾಟಾ ಅವರ ಅಜ್ಜಿ ಅನಾರೋಗ್ಯಕ್ಕೆ ಒಳಗಾದ ಪರಿಣಾಮ ಟಾಟಾ ಅವರು ಭಾರತಕ್ಕೆ ಬರಬೇಕಾಯಿತು. ಅದೇ ಸಮಯಕ್ಕೆ ಸರಿಯಾಗಿ ಭಾರತ ಮತ್ತು ಚೀನಾ ದೇಶಗಳ ನಡುವೆ ಯುದ್ಧ ನಡೆಯುತ್ತಿತ್ತು. ಇದರಿಂದಾಗಿ ರತನ್ ಅವರ ಪ್ರೀತಿಯ ಹುಡುಗಿ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ.
ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವ ಉದ್ದೇಶದಿಂದ ಆಕೆಯನ್ನು ಭಾರತಕ್ಕೆ ಕರೆಸಿಕೊಳ್ಳಲು ರತನ್ ಟಾಟಾ ಅವರು ಯೋಚಿಸಿದ್ದರು. ಆದರೆ ಭಾರತ ಮತ್ತು ಚೀನಾ ನಡುವಿನ ಯುದ್ಧದ ಕಾರಣ, ತನ್ನ ಗೆಳತಿಯ ಪೋಷಕರಿಗೆ ಅವಳನ್ನು ಭಾರತಕ್ಕೆ ಕಳುಹಿಸಲು ಇಷ್ಟವಿರಲಿಲ್ಲ. ಇದರಿಂದ ಅವರ ಪ್ರೀತಿ ವಿಫಲವಾಯಿತು. “ನಾನು ಮದುವೆಯಾಗಲು ಬಯಸಿದ ವ್ಯಕ್ತಿ ನನ್ನೊಂದಿಗೆ ಭಾರತಕ್ಕೆ ಬರಬೇಕೆಂದು ನಾನು ಬಯಸಿದ್ದೆ, ಆದ್ದರಿಂದ ಅವಳನ್ನು ಭೇಟಿಯಾಗಲು ಹಿಂತಿರುಗಿದೆ. ಆದರೆ ಯುದ್ಧದ ಕಾರಣ, ಅವಳ ಪೋಷಕರು ಅವಳನ್ನು ನನ್ನೊಂದಿಗೆ ಕಳುಹಿಸಲು ಒಪ್ಪಲಿಲ್ಲ. ಇದರೊಂದಿಗೆ ನಮ್ಮ ಸಂಬಂಧವು ಕೊನೆಗೊಂಡಿತು ಎಂದು ಹೇಳಿದರು.
ಇಂದು ಅಡುಗೆಮನೆಯಲ್ಲಿ ಬಳಸುವ ಉಪ್ಪಿನಿಂದ ಹಿಡಿದು ಆಕಾಶದಲ್ಲಿ ವಿಮಾನ ಪ್ರಯಾಣದವರೆಗೆ ಟಾಟಾ ಗ್ರೂಪ್ ಕಂಪನಿಗಳು ತಮ್ಮ ಅಸ್ತಿತ್ವವನ್ನು ಸಾರಿವೆ. ಮದುವೆಯಾಗದಿದ್ದರೂ ರತನ್ ಟಾಟಾ ತುಂಬಾ ಸಂತೋಷದ ಜೀವನ ನಡೆಸುತ್ತಿದ್ದರು. ಕಾರುಗಳಿಂದ ಹಿಡಿದು ಪಿಯಾನೋ ನುಡಿಸುವವರೆಗೆ ಎಲ್ಲದರಲ್ಲೂ ಅವರಿಗೆ ಆಸಕ್ತಿಯಿತ್ತು. 2012 ರಲ್ಲಿ 75 ನೇ ವಯಸ್ಸಿನಲ್ಲಿ ಟಾಟಾ ಸನ್ಸ್ ನಿಂದ ನಿವೃತ್ತರಾದ ನಂತರವೂ ಅವರು ವಿವಿಧ ಚಟುವಟಿಕೆಗಳ ಮೂಲಕ ಸಕ್ರಿಯರಾಗಿದ್ದರು.