ಬೆಂಗಳೂರು: ನಾಳೆಯಿಂದ 2021-2022 ರ ಸಾಲಿನ SSLC ಪರೀಕ್ಷೆಗಳು ಪ್ರಾರಂಭಗೊಳ್ಳಲಿದ್ದು, ಶಿರವಸ್ತ್ರ ಧರಿಸಿ SSLC ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅಡ್ಡಿ ಮಾಡದಿರಿ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.
SSLC ಪರೀಕ್ಷೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸುತ್ತೋಲೆಯನ್ನು ಹೊರಡಿಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸುವ ಕುರಿತು ಆದೇಶಿಸಿದೆ. ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಸರಕಾರಿ ಶಾಲೆಗಳಿಗೆ ಸಮವಸ್ತ್ರ ನಿಗದಿಪಡಿಸುವ ಹಕ್ಕು ಸರಕಾರಕ್ಕಿದೆ, ಆದರೆ ಅಲ್ಲಿ ಎಲ್ಲಿಯೂ ಸಹ ಶಿರವಸ್ತ್ರ ನಿಷೇಧದ ಉಲ್ಲೇಖವಿಲ್ಲ. ಸರಕಾರ ಈ ವಿಚಾರದಲ್ಲಿ ಸೂಕ್ಷ್ಮತೆಯಿಂದ ವರ್ತಿಸಬೇಕು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಸರಕಾರ ಅನುಮತಿಸಿದರೆ ಅದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುವುದಿಲ್ಲ ಎಂದಿದೆ.
ಹಾಗಾಗಿ ವಿದ್ಯಾರ್ಥಿನಿಯರ ಸಾಂವಿಧಾನಿಕ ಮೂಲಭೂತ ಹಕ್ಕನ್ನು ಸರಕಾರ ಖಾತರಿಪಡಿಸಿ ವಿದ್ಯಾರ್ಥಿನಿಯರ ಭವಿಷ್ಯದ ಹಿತ ದೃಷ್ಟಿಯಿಂದ ಸ್ವ ಇಚ್ಛೆಯಿಂದ ಶಿರವಸ್ತ್ರ ಧರಿಸುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿರವಸ್ತ್ರದೊಂದಿಗೆ SSLC ಪರೀಕ್ಷೆ ಬರೆಯಲು ಸರಕಾರ ಅನುಮತಿ ನೀಡಬೇಕೆಂದು ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಆಗ್ರಹಿಸಿದ್ದಾರೆ.