ಮಂಗಳೂರು: ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು ಎಂದು ಬೋಧಿಸಿದ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು, ರಾಜಕೀಯ ಉದ್ದೇಶಕ್ಕಾಗಿ ಕೆಲವು ಪಕ್ಷಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ವಿಷಾದನೀಯ ಎಂಬುದಾಗಿ ಬಿರುವೆರ್ ಕುಡ್ಲ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುವೆರ್ ಕುಡ್ಲದ ವಕ್ತಾರ ಲಕ್ಷ್ಮೀಶ್ ಸುವರ್ಣ, ನಾರಾಯಣ ಗುರುಗಳು ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿನ ವಿರುದ್ಧ ಹೋರಾಟ ನಡೆಸಿದವರು. ಗುರುಗಳು ಸಮಾಜಕ ಸುಧಾರಕರಾಗಿ ಸಮಾಜದ ತಾರತಮ್ಯಗಳನ್ನು ನಿವಾರಿಸುವ ಜೊತೆಗೆ ಸಮಾಜದಲ್ಲಿ ಧರ್ಮ, ಅಧ್ಯಾತ್ಮ ಜಾಗೃತಿಯನ್ನೂ ಮೂಡಿಸಿದ ಮಹಾತ್ಮರು. ಗಣರಾಜ್ಯೋತ್ಸವಕ್ಕಾಗಿ ಕೇರಳ ಸರಕಾರ ಕಳುಹಿಸಿದ ಇವರ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ಕಡೆಗಣಿಸಿದೆ ಎಂಬ ಆರೋಪದ ಮೂಲಕ ವಿವಾದ ಸೃಷ್ಟಿಸಿ ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕೆಂಬ ಉದ್ದೇಶದಿಂದ ಇರುವ ಪಕ್ಷಗಳು ಜನರ ಮನಸ್ಸಿನಲ್ಲಿ ಗೊಂದಲ ಉಂಟು ಮಾಡಲೆತ್ನಿಸುತ್ತಿರುವುದು ಖಂಡನೀಯ. ಸುಳ್ಳು ಪ್ರಚಾರದ ಮೂಲಕ ಜನರ ನಡುವೆ ಒಡಕುಂಟು ಮಾಡಲು ಮುಂದಾಗಿರುವುದು ಖೇದಕರ, ಇಂತಹ ಹುನ್ನಾರಗಳ ವಿರುದ್ಧ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಗಣರಾಜ್ಯೋತ್ಸವ ದಿನದಂದು ದಿಲ್ಲಿಯ ರಾಜಪಥದಲ್ಲಿ ಸಾಗುವ ಟ್ಯಾಬ್ಲೋಗಳ ಆಯ್ಕೆಗಾಗಿ ಕೆಲವು ಮಾರ್ಗದರ್ಶಿ ಸೂತ್ರಗಳಿವೆ. ಕೇಂದ್ರ ಕಳುಹಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕೇರಳ ನಿರ್ಲಕ್ಷ್ಯ ಮಾಡಿದೆ. ಕೇರಳ ಸರಕಾರದ ಧೋರಣೆಯಿಂದ ರದ್ದಾಗಿದೆ ವಿನಃ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಎನ್ನುವ ಕಾರಣಕ್ಕೆ ಕೇಂದ್ರ ಸರಕಾರ ರದ್ದು ಮಾಡಿಲ್ಲ ಎಂಬುದು ವಾಸ್ತವ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬ್ರಹ್ಮಗಳ ಧೈಯ ವಾಕ್ಯವನ್ನು ಪರಿಪಾಲಿಸುವ ಅವರ ಮಾರ್ಗದರ್ಶನ ಅನುಸರಿಸುವ ನಾಯಕರಾಗಿದ್ದಾರೆ ಎಂದರು.
ಗಣರಾಜ್ಯೋತ್ಸವದಂದು ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರದ ಮೆರವಣಿಗೆಗೆ ನಮ್ಮೆಲ್ಲರ ಬೆಂಬಲವಿದೆ.ಈ ಮೂಲಕ ಶ್ರೀನಾರಾಯಣ ಗುರುಗಳ ಮೇಲೆ ಇಟ್ಟಿರುವ ಅಭಿಮಾನ, ಭಕ್ತಿ ಪ್ರಪಂಚಕ್ಕೆ ಮಾದರಿಯಾಗುವಂತೆ ಆಗಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿರುವೆರ್ ಕುಡ್ಲದ ಮುಖಂಡರಾದ ಸಹನಾ ಕುಂದರ್, ವಿದ್ಯಾ ರಾಕೇಶ್, ರಾಕೇಶ್ ಸಾಲ್ಯಾನ್, ಲಕ್ಷ್ಮೀಶ್ ಸುವರ್ಣ, ಕಿಶೋರ್ ಬಾಬು, ಪ್ರಾಣೇಶ್ ಬಂಗೇರ, ಕಿರಣ್, ರಕ್ಷಿತ್ ಸುವರ್ಣ ಮತ್ತಿತರರು ಇದ್ದರು.