ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಸಚಿವ ಈಶ್ವರಪ್ಪ ಅವರು ಯಾವುದೇ ತಪ್ಪು ಮಾಡಿಲ್ಲ ಎನ್ನುವ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಪೊಲೀಸ್ ತನಿಖೆ ಮೇಲೆ ಪ್ರಭಾವ ಬೀರುವುದಿಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ವಿಧಾನಸೌಧದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಮುಖ್ಯಮಂತ್ರಿ ಕಳಂಕಿತರ ರಕ್ಷಣೆಗೆ ಮುಂದಾಗಿದ್ದಾರೆ. ಆ ಮೂಲಕ ಅವರು ಬಹುದೊಡ್ಡ ಅಪರಾಧ ಮಾಡುತ್ತಿದ್ದಾರೆ. ಗೃಹಮಂತ್ರಿಯಾಗಿ ಬೊಮ್ಮಾಯಿ ಕಾರ್ಯನಿರ್ವಹಿಸಿದ್ದವರು, ಅವರಿಗೆ ಈ ರೀತಿಯ ಹೇಳಿಕೆ ನೀಡಬಾರದು ಎಂದು ಗೊತ್ತಿಲ್ಲವೇ? ಅವರೇ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಚಿವ ಈಶ್ವರಪ್ಪರ ಕಮಿಷನ್ ಕಿರುಕುಳವೇ ನನ್ನ ಆತ್ಮಹತ್ಯೆಗೆ ಕಾರಣ ಎಂದು ಸಂತೋಷ್ ವಾಟ್ಸಾಪ್ ಸಂದೇಶ ರವಾನಿಸಿದ್ದಾನೆ, ಅಲ್ಲದೇ ಮೃತನ ಪತ್ನಿ, ತಾಯಿ ಹಾಗೂ ಪಂಚಾಯತಿ ಅಧ್ಯಕ್ಷರು ಇದೇ ಹೇಳಿಕೆ ನೀಡಿದ್ದಾರೆ. ಸಂತೋಷ್ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲೂ ಇದನ್ನೇ ಹೇಳಿದ್ದಾರೆ, ಆದರೂ ಮುಖ್ಯಮಂತ್ರಿಯ ಹೇಳಿಕೆಯಿಂದ ಪೊಲೀಸರು ಪ್ರಕರಣದ ನ್ಯಾಯಯುತ ತನಿಖೆ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಲಂಚದ ಆರೋಪದ ಹೊರತಾಗಿಯೂ ಇನ್ನೂ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಎಫ್ ಐಆರ್ ದಾಖಲಾಗದೇ ವಿಳಂಬವಾದದ್ದು ಯಾಕೆ? ಬೇರೆ ಪ್ರಕರಣಗಳಲ್ಲಿ ಕಾನೂನು ಪಾಲನೆ ಮಾಡಲಾಗುತ್ತದಿಯೋ ಅದೇ ರೀತಿ ಈ ಪ್ರಕರಣದಲ್ಲೂ ಕಾನೂನು ಪಾಲನೆ ಆಗಬೇಕು. ಸಚಿವ ಈಶ್ವರಪ್ಪ ಬಂಧನ ಆಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಡಿಕೆಶಿ ಹೇಳಿದ್ದಾರೆ.
ಮೊದಲು ಸಂತೋಷ್ ಯಾರೆಂದೂ ಗೊತ್ತೇ ಇಲ್ಲ ಎಂದು ಈಶ್ವರಪ್ಪ ಸುಳ್ಳು ಹೇಳಿದ್ದಾರೆ, ಆದರೆ ಮಾದ್ಯಮಗಳಲ್ಲಿ ಸಂತೋಷ್ ಜತೆಗಿನ ಸಚಿವರ ಫೋಟೋಗಳು ಪ್ರಸಾರವಾಗಿವೆ. ನಾನು ವರ್ಕ್ ಆರ್ಡರ್ ಕೊಟ್ಟಿಲ್ಲ ಎಂದು ಈಶ್ವರಪ್ಪ ಹೇಳುತ್ತಾರೆ. ಆದರೆ ಸಂತೋಷ್ ಗೆ ಕೆಲಸ ಮಾಡಲು ಈಶ್ವರಪ್ಪನವರು ಹೇಳಿದ್ದಕ್ಕೆ ನಾನೇ ಸಾಕ್ಷಿ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹೇಳಿದ್ದಾರೆ. ಈಶ್ವರಪ್ಪ ಒಬ್ಬ ಸುಳ್ಳಿನ ಕಾರ್ಖಾನೆಯಂತೆ, ಯಾವತ್ತೂ ನುಡಿದಂತೆ ನಡೆದವರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.