ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಮೇಕೆದಾಟು ಯೋಜನೆಯ ಭೂಮಿಪೂಜೆ ನೆರವೇರಿಸಲಿ: ಡಿ.ಕೆ. ಶಿವಕುಮಾರ್ ಆಗ್ರಹ

Prasthutha|

ಬೆಂಗಳೂರು: ‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇದೆ ಅಂತಾರೆ. ಹೀಗಾಗಿ ಮೇಕೆದಾಟು ಯೋಜನೆಗೆ ಬೇಕಾದ ಎಲ್ಲ ಅನುಮತಿಗಳನ್ನು ಪಡೆದು ಶೀಘ್ರವೇ ಯೋಜನೆ ಭೂಮಿಪೂಜೆ ನೆರವೇರಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

- Advertisement -

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ , ‘ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದು, ಮೇಕೆದಾಟು ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿದ್ದಾರೆ. ಈ ಶುಭಗಳಿಗೆಯಲ್ಲಿ ಸರ್ಕಾರ ಮೇಕೆದಾಟು ಯೋಜನೆ ಭೂಮಿ ಪೂಜೆಗೆ ಸಮಯ ನಿಗದಿ ಮಾಡಿದೆ ಎಂದು ನಾನು ನಂಬಿದ್ದೇನೆ.

ಬೇರೆ ಯೋಜನೆಗಳಲ್ಲಿ ಸರ್ಕಾರ ಟೆಂಡರ್ ಕರೆಯದೇ ಭೂಮಿ ಪೂಜೆ ಮಾಡುತ್ತದೆ. ಈ ಯೋಜನೆಯಲ್ಲಿ ಸರ್ಕಾರ ಟೆಂಡರ್ ಕರೆದು ಭೂಮಿಪೂಜೆ ಮಾಡಿ ಕೆಲಸ ಆರಂಭಿಸಲಿ. ಕೇಂದ್ರದಲ್ಲಿ ಅವರದೇ ಸರ್ಕಾರ ಇರುವ ಕಾರಣ, ಯೋಜನೆಗೆ ಬೇಕಾದ ಎಲ್ಲ ಅನುಮತಿಗಳನ್ನು ಪಡೆದು ಆದಷ್ಟು ಬೇಗ ನಮ್ಮ ನಾಡಿಗೆ ಒಳ್ಳೆಯ ಕೆಲಸ ಮಾಡಲಿ.

- Advertisement -

ಬಿಜೆಪಿಯವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಡಬಲ್ ಇಂಜಿನ್ ಸರ್ಕಾರ ಇರುತ್ತದೆ. ರಾಜ್ಯದ ಎಲ್ಲ ಕೆಲಸಗಳನ್ನು ಸುಲಭವಾಗಿ ಮಾಡುತ್ತೇವೆ ಎಂದಿದ್ದರು. ಆ ಕೆಲಸವನ್ನು ಅವರೀಗ ಮಾಡಲಿ. ಪಕ್ಷ ಬೇರೆ, ಸರ್ಕಾರ ಬೇರೆ ಎನ್ನುವುದಾದರೆ, ಅವರು ಪಕ್ಷದಿಂದಲೇ ಸರ್ಕಾರ ನಡೆಸುತ್ತಿದ್ದಾರೆ ಅಲ್ಲವೇ? ಇದು ಬಿಜೆಪಿ ಸರ್ಕಾರವೇ ಅಥವಾ ಪ್ರತ್ಯೇಕ ಸರ್ಕಾರವೇ?

ಶೇಖಾವತ್ ಅವರು ನೀರಾವರಿ ಸಚಿವರಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ಸಾಕಷ್ಟು ಒಳ್ಳೆಯ ಕೆಲಸ ಮಾಡಿಕೊಟ್ಟಿದ್ದಾರೆ. ಅದೇ ರೀತಿ ನಮ್ಮ ರಾಜ್ಯಕ್ಕೂ ಹೆಚ್ಚಿನ ಅನುಕೂಲ ಮಾಡಿಕೊಡಲಿ. ಯಾವ ಬಿಜೆಪಿ ಸಂಸದರೂ ಬಾಯಿ ತೆಗೆಯುತ್ತಿಲ್ಲ. ಎಲ್ಲರೂ ಬೀಗ ಹಾಕಿಕೊಂಡಿದ್ದಾರೆ. ಅವರು ರಾಜ್ಯದ ಹಿತಕ್ಕೆ ಬೀಗ ಹಾಕಿದ್ದು, ನೀವೆಲ್ಲ ಸೇರಿ ಅವರಿಗೆ ಉತ್ತಮ ಬೀಗವನ್ನು ಉಡುಗೊರೆಯಾಗಿ ನೀಡಬೇಕು.

ಟೆಂಡರ್ ಅಕ್ರಮದ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ:

ಸರ್ಕಾರ ಕರೆದಿರುವ ಟೆಂಡರ್ ಗಳ ಬಗ್ಗೆ ಮಾಹಿತಿ ಕೇಳಿದ್ದು, ಅದನ್ನು ಪಡೆದು ವಿಧಾನಸಭೆಯಲ್ಲಿ ಮಾತನಾಡುತ್ತೇನೆ. ಕೇವಲ ನೀರಾವರಿ ಟೆಂಡರ್ ಮಾತ್ರವಲ್ಲ, ಎಲ್ಲದೂ ಇದೆ. ಯಾವ ಟೆಂಡರ್ ಕರೆದಿದ್ದಾರೆ, ಅದರ ಮೊತ್ತ ಎಷ್ಟಿತ್ತು, ಈಗ ಎಷ್ಟು ಹೆಚ್ಚಾಗಿದೆ ಎಂಬುದನ್ನು ಅಲ್ಲಿ ಮಾತಾಡುತ್ತೇನೆ. ಈಗ ಆ ಬಗ್ಗೆ ಮಾತನಾಡುವುದಿಲ್ಲ.’

ಮೊದಲು ಜನಸಂಖ್ಯೆ ನಿಯಂತ್ರಣ ವಿಧೇಯಕ ಮಂಡನೆಯಾಗಲಿ:

ಉತ್ತರ ಪ್ರದೇಶ ಮಾದರಿಯಲ್ಲಿ ಜನಸಂಖ್ಯೆ ನಿಯಂತ್ರಣ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ತರುವ ಬಗ್ಗೆ ಸಿ.ಟಿ ರವಿ ಅವರ ಹೇಳಿಕೆ ಕುರಿತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿ.ಟಿ ರವಿ ಅವರು ಬಹಳ ದೊಡ್ಡ ನಾಯಕರು, ರಾಷ್ಟ್ರೀಯ ನಾಯಕರು. ರಾಷ್ಟ್ರದ ಬಗ್ಗೆ ಚಿಂತನೆ ನಡೆಸುತ್ತಾ ಬಹಳ ದೊಡ್ಡ ಹೇಳಿಕೆ ನೀಡುತ್ತಿರುತ್ತಾರೆ. ಅವರ ಮಾತು ಇಲ್ಲಿ ಬೇಡ. ಜನಸಂಖ್ಯೆ ನಿಯಂತ್ರಣ ಮಸೂದೆ ವಿಧಾನಭೆಯಲ್ಲಿ ಮಂಡನೆಯಾಗಲಿ. ಅವರು ರಾಷ್ಟ್ರ ನಾಯಕರಾದರೆ, ನಾನು ಕೇವಲ ರಾಜ್ಯ ನಾಯಕ’ ಎಂದರು.



Join Whatsapp