ಹಿಂದೂ ಪದ ಬಳಕೆ: ಜಾರಕಿಹೊಳಿ ವಿರುದ್ಧ ಡಿಕೆಶಿ ಕೆಂಡಾಮಂಡಲ

Prasthutha|

ಹುಬ್ಬಳ್ಳಿ: ಹಿಂದೂ ಪದ ಅಶ್ಲೀಲ ಎಂಬ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಇದನ್ನು ಕಾಂಗ್ರೆಸ್ ಪಕ್ಷ ತಳ್ಳಿಹಾಕುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಂಡಾಮಂಡಲವಾಗಿದ್ದಾರೆ.

- Advertisement -

ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ಅವರದು ವೈಯಕ್ತಿಕ ಹೇಳಿಕೆಯಾಗಿದ್ದು, ಇದನ್ನು ಪಕ್ಷ ಒಪ್ಪುವುದಿಲ್ಲ, ತಿರಸ್ಕರಿಸುತ್ತದೆ ಹಾಗೂ ಖಂಡಿಸುತ್ತದೆ. ನಮ್ಮ ಪಕ್ಷ ಬಹು ಧರ್ಮ, ಬಹುಭಾಷೆ ಒಪ್ಪುವ ಪಕ್ಷ. ಯಾರ ಭಾವನೆಗೂ ನಾವು ಧಕ್ಕೆ ತರಲು ಬಯಸುವುದಿಲ್ಲ. ಈ ವಿಚಾರವಾಗಿ ಅವರಿಂದ ಸ್ಪಷ್ಟೀಕರಣವನ್ನು ಬಯಸುತ್ತೇವೆ. ಅವರು ತಮ್ಮ ಮನೆಯಲ್ಲಿ ಏನಾದರೂ ಮಾಡಿಕೊಳ್ಳಲಿ. ಆದರೆ ಸಾರ್ವಜನಿಕವಾಗಿ ಮಾತನಾಡುವಾಗ ಹೀಗೆ ಆಗಬಾರದು ಎಂದು ಡಿಕೆಶಿ ಹೇಳಿದರು.

- Advertisement -

ಫುಟ್ ಪಾತ್ ವ್ಯಾಪಾರಿಯಿಂದ ಸಚಿವ ಭೈರತಿ ಬಸವರಾಜು ಅವರು 15 ಲಕ್ಷ ವಸೂಲಿ ಮಾಡಿರುವ ಬಗೆಗಿನ ಆಡಿಯೋ ಕುರಿತು ಕೇಳಿದಾಗ, ‘ ಕೇವಲ ಅವರಷ್ಟೇ ಅಲ್ಲ, ಇಡೀ ಸರ್ಕಾರ ನಿಂತಿರುವುದೇ ಲಂಚದ ಮೇಲೆ. ಇದು ಲಂಚ ಹಾಗೂ ಕಮಿಷನ್ ಸರ್ಕಾರ. ಇವರು ಬೀದಿ ವ್ಯಾಪಾರಿಗಳಿಂದ ಹಿಡಿದು ಯಾರನ್ನೂ ಬಿಡುವುದಿಲ್ಲ.  ಬೀದಿ ಬದಿ ವ್ಯಾಪಾರಿಗಳು ಕಷ್ಟ ಪಟ್ಟು ದುಡಿಯುತ್ತಿದ್ದು, ಅವರಿಗೆ ಇಷ್ಟು ತೊಂದರೆ ಕೊಡುತ್ತಾರೆ ಎಂದರೆ, ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಉತ್ತರ ನೀಡಬೇಕು’ ಎಂದರು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಬೇಕು ಎಂಬ ಕೂಗಿನ ಕುರಿತು ಕೇಳಿದ ಪ್ರಶ್ನೆಗೆ, ‘ ಅನಗತ್ಯ ಗೊಂದಲಕ್ಕೆ ಅವಕಾಶ ನೀಡಬಾರದು. ಇಷ್ಟು ವರ್ಷಗಳ ಕಾಲ ಹೇಗೆ ನಡೆದುಕೊಂಡು ಬಂದಿತ್ತೋ ಹಾಗೆ ಮುಂದುವರಿಯಬೇಕು. ಈ ರೀತಿಯ ವಿಚಾರಗಳಿಂದ ಶಾಂತಿ ಕದಡಬಾರದು, ಜಾತ್ಯಾತೀತ ಸಮಾಜ ಇರಬೇಕು ‘ ಎಂದು ಹೇಳಿದರು.

ಭಾರತ ಜೋಡೋ ಯಾತ್ರೆ ವಿಡಿಯೋಗೆ ಕೆಜಿಎಫ್ 2 ಹಾಡು ಬಳಸಿದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಸಿನಿಮಾ ಹಾಡುಗಳನ್ನು ತಮ್ಮ ವಿಡಿಯೋಗಳಿಗೆ ಹಾಕುವುದು ಸಾಮಾನ್ಯ. ಆದರೆ ನ. 21ರ ವರೆಗೂ ಸಾಮಾಜಿಕ ಜಾಲತಾಣ ಖಾತೆ ನಿರ್ಬಂಧಿಸಲು ಸೂಚನೆ ನೀಡಲಾಗಿದೆ. ಬಿಜೆಪಿ ಅವರಿಗೆ ಈ ಯಾತ್ರೆ ಯಶಸ್ಸು ಕಂಡು ಭಯವಾಗಿದೆ. ಗಾಂಧಿ ಅವರು ಬ್ರಿಟಿಷರನ್ನು ಓಡಿಸಲು ಭಾರತ ಚೋಡೋ ಎಂದು ಯಾತ್ರೆ ಮಾಡಿದರೆ, ಮೋದಿ ಅವರು ದೇಶ ಒಡೆಯಲು ಭಾರತ ತೋಡೋ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ದೇಶ ಒಗ್ಗೂಡಿಸಲು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ಕಾಂಗ್ರೆಸ್ ಯಾತ್ರೆ ಸಹಿಸಲು ಬಿಜೆಪಿ ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಇಡೀ ದೇಶದ ಜನ ಈ ಯಾತ್ರೆಗೆ ಬೆಂಬಲ ನೀಡುತ್ತಿದ್ದಾರೆ ‘ ಎಂದರು.


ಭಾರತ ಜೋಡೋ ಯಾತ್ರೆ ಬಿಜೆಪಿಗೆ ಭಯ ತಂದಿದೆ. ಈ ಹಿಂದೆ ಗಾಂಧೀಜಿ ಭಾರತ ಜೋಡೋ ಮಾಡಿದ್ದರು. ಆ ನಂತರ ಮೋದಿ ಭಾರತ ತೋಡೋ ಮಾಡುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಭಾರತ ಜೋಡೋ ಮಾಡುತ್ತಿದ್ದಾರೆ. ಇದೇ ನಮಗೂ ಅವರಿಗೆ ಇರುವ ವ್ಯತ್ಯಾಸ. ಅದನ್ನು ಸಹಿಸಲು ಆಗದ ಬಿಜೆಪಿಯವರು ಭಾರತ ಜೋಡೋ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೂಡ ಹೇಳಿದ್ದಾರೆ.



Join Whatsapp