ಮೈಸೂರು: ಬಹುತೇಕ ಎಲ್ಲ ಸಮುದಾಯಗಳ ನಾಯಕರನ್ನು ಕಾಂಗ್ರೆಸ್ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ದಲಿತ ಸಮುದಾಯದವರು ಕೂಡ ಯಾಕೆ ಮುಖ್ಯಮಂತ್ರಿ ಆಗಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮಂಗಳವಾರ ಇಲ್ಲಿನ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಿ 136ಕ್ಕಿಂತಲೂ ಹೆಚ್ಚು ಸೀಟುಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಆಂತರಿಕ ಸಮೀಕ್ಷೆಯೂ ನಮಗೆ ಬಹುಮತ ಬರಲಿದೆಯೆಂಬುದನ್ನು ಹೇಳಿದೆ. ಅರಸು, ವೀರಪ್ಪ ಮೊಯ್ಲಿ, ಗುಂಡೂರಾವ್, ಬಂಗಾರಪ್ಪ, ಸಿದ್ದರಾಮಯ್ಯ ಸಿ.ಎಂ ಆಗಿದ್ದಾರೆ. ದಲಿತ ಸಿ.ಎಂ ಯಾಕಾಗಬಾರದು? ಎಂದು ಕೇಳಿದರು.
‘ರಾಜ್ಯ ಬಿಜೆಪಿ ಸರ್ಕಾರದಿಂದ ನಿತ್ಯ ನಡೆಯುತ್ತಿರುವ ಹಗರಣಗಳು, ಭ್ರಷ್ಟಾಚಾರಕ್ಕೆ ಜನರು ಬೇಸತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರವು ಚುನಾವಣಾ ಪ್ರಣಾಳಿಕೆಯ ಬಹುತೇಕ ಎಲ್ಲ ಅಂಶಗಳನ್ನು ಈಡೇರಿಸಿತ್ತು. ಬಿಜೆಪಿಯು ತನ್ನ ಪ್ರಣಾಳಿಕೆಯ ಶೇ 40ರಷ್ಟು ನೆರವೇರಿಸಿದೆಯೇ? ಕಾಂಗ್ರೆಸ್ ಅಧಿಕಾರಕ್ಕೆ ಬಂದೊಡನೆ ಬಿಜೆಪಿಯ ಎಲ್ಲ ಹಗರಣಗಳ ತನಿಖೆ ನಡೆಸಲಿದೆ’ ಎಂದು ಆಶ್ವಾಸನೆ ನೀಡಿದರು.