ಬಂಟ್ವಾಳ : ಗೋಮಾಂಸ ಭಕ್ಷಣೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಅದು ಪಕ್ಷದ್ದಲ್ಲ, ಅದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ನಡೆದ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ಸ್ಪಷ್ಟಪಡಿಸಿದರು. ಗೋಹತ್ಯೆ ನಿಷೇಧ ಮಸೂದೆಗೆ ಸುಗ್ರೀವಾಜ್ಞೆ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಗೋಹತ್ಯೆ ನಿಷೇಧ ಕಾನೂನು ಅಗತ್ಯವಿರಲಿಲ್ಲ. ರಾಜಕಾರಣ ಉದ್ದೇಶದಿಂದ ಇದನ್ನು ಜಾರಿ ಮಾಡಿದ್ದಾರೆ. ಗೋವನ್ನು ಪೂಜಿಸುವ ಪದ್ಧತಿ ಮೊದಲಿನಿಂದಲೂ ಇದೆ. ಸಿದ್ದರಾಮಯ್ಯ ಅವರ ಅಭ್ಯಾಸದ ಬಗ್ಗೆಯಷ್ಟೇ ಹೇಳಿದ್ದಾರೆ. ಅವರ ಹೇಳಿಕೆಯಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದು ಶಿವಕುಮಾರ್ ಅಭಿಪ್ರಾಯ ಪಟ್ಟರು.
ಎಲ್ಲಾ ವರ್ಗದ ಮಂದಿಯೂ ಹೈನುಗಾರಿಕೆ ಮಾಡುತ್ತಾರೆ. ಅವರೆಲ್ಲರಿಗೂ ಸರಕಾರ ರೂ. 25,000ರಿಂದ 50,000 ರೂ. ವರೆಗೆ ಪರಿಹಾರ ನೀಡಲಿ. ಆ ಮೇಲೆ ಅವರ ಮನೆಗೆ ಬೇಕಾದ್ರೂ ಕರೆದೊಯ್ಯಲಿ ಎಂದು ಅವರು ಹೇಳಿದರು.
ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಈಗ ಮಾಡುವ ಅವಶ್ಯಕತೆಯಿರಲಿಲ್ಲ. ಅದನ್ನು ರಾಜಕಾರಣಕ್ಕಾಗಿ ಮಾಡಲಾಗುತ್ತಿದೆ. ಸಾಧ್ಯವಿದ್ದರೆ ಗೋಮಾಂಸ ರಫ್ತು ನಿಷೇಧ ಮಾಡಲಿ ಎಂದು ಅವರು ಸವಾಲು ಹಾಕಿದರು.