ಬೆಂಗಳೂರು: ವಿದೇಶದಲ್ಲಿ ಕುಳಿತು ಕರ್ನಾಟಕದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಸಿಂಗಾಪುರದಲ್ಲಿ ಕುಳಿತು ಸರ್ಕಾರದ ವಿರುದ್ಧ ತಂತ್ರ ರೂಪಿಸುತ್ತಿದ್ದಾರೆ. ನಮಗೆ ಬಂದ ಮಾಹಿತಿ ಪ್ರಕಾರ ಅವರೇನೋ ತಂತ್ರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾಡುವುದು ಬಿಟ್ಟು ಹೊರಗೆ ತಂತ್ರ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೇ ಪರೋಕ್ಷವಾಗಿ ಕುಮಾರಸ್ವಾಮಿ ಸಿಂಗಾಪುರ ಪ್ರವಾಸದ ಬಗ್ಗೆ ಗಂಭೀರ ಆರೋಪ ಮಾಡಿದರು.
ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ಕೆಲಸ ನಡೆಯುತ್ತಿದೆ. ಇದೆಲ್ಲಾ ಒಂದು ತಂತ್ರ. ಇದರ ಬಗ್ಗೆ ನಮಗೂ ಮಾಹಿತಿ ಬಂದಿದೆ. ಬೆಂಗಳೂರಿನಲ್ಲಿ ಆಪರೇಷನ್ ಮಾಡಿದ್ರೆ ಗೊತ್ತಾಗುತ್ತೆ ಎಂದು ಸಿಂಗಾಪುರದಲ್ಲಿ ಕೂತು ಆಪರೇಷನ್ ಮಾಡುತ್ತಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಅರೋಗ್ಯ ತಪಾಸಣೆಗೆಂದು ಸಿಂಗಾಪುರಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಪಕ್ಷದ ಮೂಲಗಳ ಪ್ರಕಾರ ಕುಮಾರಸ್ವಾಮಿ ಅವರು ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.