ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರ ಜತೆಗಿರುವ ಫೋಟೋ ಕುರಿತು ಬಿಜೆಪಿ ನಾಯಕರು ಮಾತನಾಡುತ್ತಿದ್ದು, ತನಿಖಾಧಿಕಾರಿಗಳು ನನಗೆ ನೊಟೀಸ್ ನೀಡಿ ಕರೆದು, ತನಿಖೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ನನ್ನನ್ನು ಬಹಳ ಮಂದಿ ಭೇಟಿ ಮಾಡುತ್ತಾರೆ. ಈ ಫೋಟೋ ಯಾವುದು ಎಂದು ನನಗೆ ಗೊತ್ತಿಲ್ಲ. ಈಗ ನಮ್ಮ ಸ್ನೇಹಿತರು ಈ ವಿಚಾರದ ಬಗ್ಗೆ ಹೇಳಿದ್ದಾರೆ, ಸಂತೋಷ. ಪೊಲೀಸ್ ಅಧಿಕಾರಿಗಳು ಮೊದಲು ನನಗೆ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಯಲಿ. ನಾನು ಮಂತ್ರಿಯಾಗಿ ಕೆಲಸ ಮಾಡಿದವನು. ಅವರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ನಿಯೋಗದೊಂದಿಗೆ ಬಂದಿದ್ದರು, ತಮ್ಮ ಸಮಸ್ಯೆ ಹೇಳಿಕೊಂಡು ಹೋದರು, ಅಷ್ಟೇ’ ಎಂದರು.
ಬಿಜೆಪಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಿಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಅವರು ನಮ್ಮ ಹೆಸರನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಿರಬೇಕು, ನಮ್ಮ ಫೋಟೋ ಹಾಕಿಕೊಂಡು ಪ್ರಚಾರ ಮಾಡುತ್ತಿರಬೇಕು’ ಎಂದು ಛೇಡಿಸಿದರು.
*ಪಕ್ಷದ ಚುನಾವಣೆ:*
ಇನ್ನು ಪಕ್ಷದ ಸದಸ್ಯತ್ವ ಹಾಗೂ ಆಂತರಿಕ ಚುನಾವಣೆ ಸಂಬಂಧ ಮಾಹಿತಿ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
‘ಕೇಂದ್ರದ ಮಾಜಿ ಸಚಿವರಾದ ಸುದರ್ಶನ್ ನಾಚಿಯಪ್ಪನ್ ಅವರು ಪಕ್ಷದ ಚುನಾವಣಾಧಿಕಾರಿಯಾಗಿದ್ದಾರೆ. ಇನ್ನು ಕೇರಳದ ಜೋಸೆಫ್ ಅಬ್ರಾಹಂ ಹಾಗೂ ಛತ್ತೀಸ್ ಗಡದ ಮೋತಿಲಾಲ್ ದೇವಾನಂದ್ ಅವರು ಉಪ ಚುನಾವಣಾಧಿಕಾರಿಯಾಗಿ ರಾಜ್ಯಕ್ಕೆ ಬಂದಿದ್ದಾರೆ.
ಚುನಾವಣೆ ಪ್ರಕ್ರಿಯೆ ಭಾಗವಾಗಿ ಇಂದು ನಮಗೆ ಪಕ್ಷದ ಚುನಾವಣೆ ಮತದಾರರ ಪಟ್ಟಿಯನ್ನು ಸಲ್ಲಿಸಲಾಗಿದೆ. ರಾಜ್ಯದಲ್ಲಿ ಒಟ್ಟು 78 ಲಕ್ಷ ಸದಸ್ಯರ ನೋಂದಣಿ ಆಗಿದೆ. ಮತ್ತೆ ಕೆಲವರು ಬುಕ್ ಮೂಲಕ ಸದಸ್ಯತ್ವ ಪಡೆದಿದ್ದು, ಅದನ್ನು ಮುಂದಿನ ದಿನಗಳಲ್ಲಿ ಸೇರಿಸಲಾಗುವುದು. ಆ ಮೂಲಕ ಇಡೀ ದೇಶದಲ್ಲೇ ನಾವು ಮೊದಲ ಸ್ಥಾನದಲ್ಲಿದ್ದೇವೆ.
ಈ ಸಂದರ್ಭದಲ್ಲಿ ಸದಸ್ಯತ್ವ ನೋಂದಣಿ ಮಾಡಿದ ನೋಂದಾಣಿದಾರ, ಮುಖ್ಯ ನೋಂದಾಣಿದಾರರು, ನಾಯಕರಿಗೆ ಶ್ರೀಮತಿ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರು ಅಭಿನಂದನೆ ತಿಳಿಸಿದ್ದಾರೆ. ನಾನು ಕೂಡ ಸದಸ್ಯರಾಗಿರುವ ಎಲ್ಲರನ್ನೂ ಅಭಿನಂದಿಸುತ್ತೇನೆ. ನೋಂದಾಣಿದಾರರು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸದಸ್ಯತ್ವ ನೋಂದಣಿ ಶುಲ್ಕ 5, ಗುರುತಿನ ಚೀಟಿ ಸ್ಮಾರ್ಟ್ ಕಾರ್ಡ್ ಬೇಕಾದರೆ 10 ರೂ. ಶುಲ್ಕವನ್ನು ಕೆಪಿಸಿಸಿ ಕಚೇರಿಗೆ ರವಾನಿಸಬೇಕು. ನಂತರ ಸಂಬಂಧಿಸಿದ ಬ್ಲಾಕ್ ಮಟ್ಟದ ಪಟ್ಟಿಯನ್ನು ಪ್ರಕಟಿಸುತ್ತೇವೆ.
ನಂತರ ಸದಸ್ಯತ್ವ ಪಡೆದ ಮತದಾರರ ಪಟ್ಟಿಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಾಕಲಾಗುವುದು. ಬೂತ್ ಮಟ್ಟದಲ್ಲಿ ನಾಯಕರುಗಳಿಗೆ ವಾಟ್ಸಾಪ್, ಫೇಸ್ಬುಕ್ ಮೂಲಕ ರವಾನಿಸಲಾಗುವುದು. ಇನ್ನು ಸದಸ್ಯತ್ವದ ವಿಚಾರವಾಗಿ ದೂರು ಅಥವಾ ಅಹವಾಲುಗಳಿದ್ದರೆ ಅದನ್ನು ಸಲ್ಲಿಸಲು 15 ದಿನ ಕಾಲಾವಕಾಶ ನೀಡುತ್ತೇವೆ. ನಂತರ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಈ ಅಹವಾಲು ಸ್ವೀಕರಿಸುತ್ತೇವೆ. ನಂತರ ಅಂತಿಮ ಪಟ್ಟಿ ಪ್ರಕಟ ಮಾಡಲಾಗುವುದು.
ಬೂತ್ ಮಟ್ಟದ ಸಮಿತಿ ರಚನೆಯಾಗುತ್ತದೆ. ನಂತರ ಬ್ಲಾಕ್ ಪ್ರತಿನಿಧಿಗಳಾಗಿ ಪದಾಧಿಕಾರಿಗಳಾಗಲು ಅರ್ಹರಾಗುತ್ತಾರೆ. ಆನಂತರ ಎಲ್ಲೆಲ್ಲಿ ನೂತನ ಬ್ಲಾಕ್ ಅಧ್ಯಕ್ಷರ ನೇಮಕ ಮಾಡಬೇಕೋ ಅಲ್ಲಿ ಮೇ 29 ರಿಂದ ಜೂ.10 ರ ಒಳಗೆ ಚುನಾವಣೆ ಮಾಡಲಾಗುವುದು. ಈ ಚುನಾವಣೆ ಸಮಯದಲ್ಲಿ ಪ್ರತಿ ಬ್ಲಾಕ್ ನಲ್ಲೂ ಚುನಾವಣೆ ಮೇಲ್ವಿಚಾರಣಾ ಅಧಿಕಾರಿಯನ್ನು ನೇಮಿಸಲಾಗುವುದು.
ಜಿಲ್ಲಾ ಮಟ್ಟದ ಚುನಾವಣೆ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಚುನಾವಣಾ ಅಧಿಕಾರಿಗಳು ಬರಲಿದ್ದಾರೆ. ಬ್ಲಾಕ್ ಮಟ್ಟದ ಚುನಾವಣೆಗೆ ಬೇರೆ ಕ್ಷೇತ್ರಗಳಿಂದ ಚುನಾವಣಾಧಿಕಾರಿಗಳನ್ನು ನೇಮಿಸಲಾಗುತ್ತದೆ. ಮುಕ್ತ ಚುನಾವಣೆ ಮಾಡಲಾಗುವುದು.
ನಂತರ ಜಿಲ್ಲಾ ಕಾಂಗ್ರೆಸ್ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ನಂತರ ಎಐಸಿಸಿ ಚುನಾವಣೆ ನಡೆಯಲಿದೆ. ಈ ಮೂಲಕವಾಗಿ ಕೇಡರ್ ಬೇಸ್ ಪಕ್ಷ ಮಾಡಲು, ಬೂತ್ ಮಟ್ಟದ ನಾಯಕರನ್ನು ಆಯ್ಕೆ ಮಾಡಲಿದ್ದು, ಇವರನ್ನು ಪ್ರಜಾಪ್ರತಿನಿಧಿ ಎಂದು ಕರೆಯಲಾಗುವುದು.
ನಾಳೆ ಪಕ್ಷದ ಪದಾಧಿಕಾರಿಗಳ ಸಭೆ ಮಾಡಲಿದ್ದು, ಅವರಿಗೆ ಇದೆಲ್ಲದರ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಪದಾಧಿಕಾರಿಗಳು ನೇಮಕವಾಗಲಿದ್ದು, ಅವರಿಗೂ ಜವಾಬ್ದಾರಿ ಹಂಚಲಾಗುವುದು.
ಮುಂದೆ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದ್ದು, ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕಾಗುತ್ತದೆ. ಪಕ್ಷದ ಸದಸ್ಯರಾಗಿ, ಬ್ಲಾಕ್ ಮಟ್ಟದಲ್ಲಿ ಸ್ಪರ್ಧೆ ಮಾಡಿದ್ದವರು ಮಾತ್ರ ಈ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಸದಸ್ಯರಾಗದೇ, ತಮ್ಮ ಬೂತ್ ಪ್ರತಿನಿಧಿಸದಿದ್ದರೆ ಸ್ಪರ್ಧಿಸಲು ಸಾಧ್ಯವಿಲ್ಲ. ನಾನು ಹಾಗೂ ನನ್ನ ತಮ್ಮ ಒಂದೇ ಬೂತ್ ನವರಾಗಿದ್ದು, ನಮ್ಮಿಬ್ಬರಲ್ಲಿ ಒಬ್ಬರು ಅಲ್ಲಿಂದ ಪ್ರತಿನಿಧಿಸಬಹುದು. ಮತ್ತೊಬ್ಬರು ಬೇರೆ ಬೂತ್ ನಿಂದ ಪ್ರತಿನಿಧಿಸಬಹುದು.
ಈ ಚುನಾವಣೆ ನಡೆಸಲು ಹೊರ ರಾಜ್ಯಗಳಿಂದ ಒಟ್ಟು 40 ಸದಸ್ಯರ ತಂಡ ಆಗಮಿಸಿದೆ. ಇನ್ನು ಪಕ್ಷದ ಹಿತದೃಷ್ಟಿಯಿಂದ ಮೇ 1 ರಿಂದ ಪಕ್ಷದ ಸದಸ್ಯತ್ವ ಮುಂದುವರಿಯಲಿದ್ದು, ಈಗ ಸದಸ್ಯರಾಗುವವರಿಗೆ ಪಕ್ಷದ ಆಂತರಿಕ ಚುನಾವಣೆಯಲ್ಲಿ ಮತದಾನ ಹಕ್ಕು ಇರುವುದಿಲ್ಲ.’
ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಸೇರುವುದಿಲ್ಲ ಎಂಬ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಅನೇಕ ಸಲಹೆ ಕೊಟ್ಟಿದ್ದು, ಬಹಳ ಸಂತೋಷದಿಂದ ಸ್ವೀಕಾರ ಮಾಡಿದ್ದು, ವಾರಗಟ್ಟಲೆ ಚರ್ಚೆ ಮಾಡಿದ್ದೇವೆ. ನಮ್ಮ ಪಕ್ಷ ತನ್ನದೇ ಆದ ಇತಿಹಾಸ ಹೊಂದಿದ್ದು. ಪಕ್ಷವನ್ನು ಕಾರ್ಪೊರೇಟ್ ಆಫೀಸ್ ನಂತೆ ನಡೆಸಲು ಆಗುವುದಿಲ್ಲ. ಅವರ ಸಲಹೆಗಳನ್ನು ನಾವು ಗೌರವಿಸಿದ್ದೇವೆ. ಅವರಿಗೆ ಅಭಿನಂದಿಸುತ್ತೇವೆ. ರಾಷ್ಟ್ರಮಟ್ಟದಲ್ಲಿ ಚರ್ಚೆ ಮಾಡಿ ಈ ವಿಚಾರವಾಗಿ ತೀರ್ಮಾನ ಕೈಗೊಂಡಿದ್ದು, ನಾನು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ರಾಷ್ಟ್ರ ಮಟ್ಟದ ನಾಯಕರ ತೀರ್ಮಾನವನ್ನು ನಾವು ಪಾಲಿಸುತ್ತೇವೆ’ ಎಂದರು.
ಅನೇಕರು ಪರಿಶಿಷ್ಟ ಜಾತಿ ಹಾಗೂ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ವಿಚಾರ ನಾನು ಕೇಳಿದ್ದೇನೆ. ಈ ಬಗ್ಗೆ ನಾನು ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಒಂದು ಪಕ್ಷದ ರಾಜ್ಯ ಅಧ್ಯಕ್ಷನಾಗಿ ಖಚಿತ ಮಾಹಿತಿ ಇಲ್ಲದೆ ಹೇಳಿಕೆ ನೀಡಲು ಸಾಧ್ಯವಿಲ್ಲ. ಮಾಹಿತಿ ಇಲ್ಲದೆ ಮಾತನಾಡಿದರೆ ನನಗೂ ನೊಟೀಸ್ ಕೊಡಬಹುದು’ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷ ಇನ್ನೂ 3 ಇಲಾಖೆ ಗುರಿಯಾಗಿಸಿ ಮಾಹಿತಿ ಕಲೆಹಾಕುತ್ತಿದೆಯೇ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ಜನರ ಹಿತಕ್ಕಾಗಿ, ಜನರ ಧ್ವನಿಯಾಗಿ ಕೆಲಸ ಮಾಡಲಿದೆ. ಅದು ಮೂರು ಇರಲಿ, ಮೂವತ್ತು ಇಲಾಖೆ ಇರಲಿ, ಸರ್ಕಾರದ ವೈಫಲ್ಯದ ಬಗ್ಗೆ ವಿರೋಧ ಪಕ್ಷವಾಗಿ ತನ್ನ ಕೆಲಸ ಮಾಡಲಿದೆ’ ಎಂದರು.