ದೋಲ್ಪಾಡಿ ಗ್ರಾಮದಲ್ಲಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಗ್ರಾಮವಾಸ್ತವ್ಯ

Prasthutha|

ಮಂಗಳೂರು: ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ಜನಸಾಮಾನ್ಯರಿಗೆ ಆಗಬೇಕಾದ ಕೆಲಸ ಕಾರ್ಯಗಳಲ್ಲಿ ವಿಳಂಬತೆಗೆ ಆಸ್ಪದ ನೀಡದಂತೆ ಅವುಗಳನ್ನು ಗ್ರಾಮ ಮಟ್ಟದಲ್ಲಿ ಮಾಡಿಕೊಡಲು ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದೆ, ಗ್ರಾಮಸ್ಥರ ಅಹವಾಲು ಆಲಿಸಲು ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಹಾಗೂ ಈ ಕಾರ್ಯಕ್ರಮದಲ್ಲಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು, ಕೆಲವೊಂದು ಕಠಿಣ ಸಮಸ್ಯೆಗಳಿದ್ದರೆ ಅವುಗಳ ಪರಿಹಾರಕ್ಕೆ ರಾಜ್ಯ ಮಟ್ಟಕ್ಕೆ ಶಿಫಾರಸು ಮಾಡಲಾಗುವುದು, ಆ ಮೂಲಕ ಗ್ರಾಮದ ಸರ್ವತೋಮುಖ ಪ್ರಗತಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದರು.

- Advertisement -

 ಅವರು ಸೋಮವಾರ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಎಂಬ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿನ ಅಹವಾಲುಗಳ ಪರಿಹಾರಕ್ಕೆ ಸ್ಥಳೀಯ ಗ್ರಾಮಸ್ಥರು ನೀಡಿರುವ ಅರ್ಜಿಗೆ ಸಂಬಂಧಿಸಿದ ಇಲಾಖೆಯವರು ಸ್ಥಳದಲ್ಲಿ ಕ್ರಮ ಜರುಗಿಸಿ ಪರಿಹಾರ ಕಲ್ಪಿಸಲು ಅಧಿಕಾರಿಗಳೆಲ್ಲರೂ ಬಂದಿದ್ದಾರೆ ಎಂದರು.

- Advertisement -

ಈ ಸಂದರ್ಭದಲ್ಲಿ ವಿವಿಧ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಪಾಲ್ತಾಡಿ ಗ್ರಾಮದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಅಂದಾಜು 25ಕ್ಕೂ ಹೆಚ್ಚು ಕುಟುಂಬಗಳಿಗೆ ನೀರಾವರಿ ಸೌಲಭ್ಯ ದೊರೆತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ, ಅದಕ್ಕಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ತಮ್ಮ ಮಟ್ಟದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮತಿಗಾಗಿ ಕಳುಹಿಸುವಂತೆ ತಿಳಿಸಿದರು, ಅದೇ ರೀತಿ ಪ್ರತ್ಯೇಕ ಪಾಲ್ತಾಡಿ ಗ್ರಾಮ ಪಂಚಾಯತ್  ಮಾಡಬೇಕೆಂಬ ಗ್ರಾಮಸ್ಥರ ಅಹವಾಲಿಗೆ ಈ ಬಗ್ಗೆ ಸರ್ಕಾರಕ್ಕೆ ಗಮನ ಸೆಳೆಯುವುದಾಗಿ ತಿಳಿಸಿದರು.

 ಕಳೆದ 60 ವರ್ಷಗಳಿಂದ ಚಾಲ್ತಿಯಲಿದ್ದ ರಸ್ತೆಯೊಂದನ್ನು ಇದೀಗ ಬಂದ್ ಮಾಡಲು ಸಾಧ್ಯವಿಲ್ಲ, ಅದನ್ನು ಕೂಡಲೇ ಯಥಾ ಸ್ಥಿತಿಗೆ ತರುವ ಬಗ್ಗೆ ಆದೇಶ ಹೊರಡಿಸುವುದಾಗಿ ತಿಳಿಸಿದರು.

  ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್ ಕುಮಾರ್, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ವೇದಿಕೆಯಲ್ಲಿದ್ದರು.  ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರಿದ್ದರು.

Join Whatsapp