ಪರ್ಸೆಂಟೇಜ್ ಆರೋಪ ತನಿಖೆ | ಸದನ ಸಮಿತಿ ರಚನೆಗೆ ಡಿ.ಕೆ. ಶಿವಕುಮಾರ್ ಆಗ್ರಹ

Prasthutha|

ಬೆಂಗಳೂರು: ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಕಾರ್ಪೊರೇಷನ್ ಕಾಮಗಾರಿಗಳಲ್ಲಿ ಶೇಕಡ 40 ರಷ್ಟು ಕಮಿಷನ್ ಆರೋಪದ ತನಿಖೆಗೆ ವಿಧಾನ ಮಂಡಲದ ಉಭಯ ಸದನಗಳ ಜಂಟಿ ಸದನ ಸಮಿತಿ ರಚಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಬಿಜೆಪಿ ಸರಕಾರವನ್ನು ಒತ್ತಾಯಿಸಿದ್ದಾರೆ.

- Advertisement -


ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರಕಾರದ್ದೂ ಸೇರಿಸಿ ತನಿಖೆ ನಡೆಸಲಾಗುವುದು ಎಂಬ ಸಿಎಂ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ” ಯಾರು ಬೇಡ ಅಂದೋರು? ಕಳೆದ 10 ವರ್ಷಗಳದ್ದನ್ನೂ ಸೇರಿಸಿ ತನಿಖೆ ಮಾಡಿಸಲಿ. ಸಾರ್ವಜನಿಕರ ಹಣ ಯಾರು ದುರುಪಯೋಗ ಮಾಡಿದ್ದರೂ ತಪ್ಪೇ? ಅದು ಬಿಜೆಪಿಯವರು ಇರಲಿ, ಕಾಂಗ್ರೆಸ್ ನವರು ಇರಲಿ, ಜೆಡಿಎಸ್ ನವರು ಇರಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಬಿಜೆಪಿಯವರ ನೇತೃತ್ವದಲ್ಲೇ ಸದನ ಸಮಿತಿ ರಚನೆ ಆಗಲಿ. ಅವರ ಪಾರ್ಟಿ ಬಿಜೆಪಿಯವರನ್ನೇ ಅಧ್ಯಕ್ಷರನ್ನಾಗಿ ಮಾಡಲಿ ಎಂದರು.


ಪ್ರಧಾನಿಯವರಿಗೆ ದೂರು ಹೋಗಿದೆ. ಅವರ ಪಕ್ಷದವರೂ ದೂರಿದ್ದಾರೆ. ರಾಕೇಶ್ ಸಿಂಗ್ ಅವರು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳು. ಅವರೇನು ತನಿಖೆ ಮಾಡಲು ಸಾಧ್ಯ? ಅದಕ್ಕೆ ಹೇಳಿದ್ದು ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಲಿ ಎಂದು. ಅದನ್ನು ಮಾಡಲು ಈ ಸರಕಾರದವರು ಹೋಗುವುದಿಲ್ಲ. ಹೋಗಲಿ ಮೊದಲಿಗೆ ಸದನ ಸಮಿತಿಯಿಂದ ತನಿಖೆ ಮಾಡಿಸಲಿ. ಯಾರು, ಯಾರು, ಏನು ಮಾಡಿದ್ದಾರೆ ಎಂಬುದು ಆಚೆ ಬರಲಿ ಎಂದೂ ಶಿವಕುಮಾರ್ ಅವರು ಹೇಳಿದರು.

- Advertisement -


ಪರ್ಸೆಂಟೇಜ್ ವಿರುದ್ಧ ಹೋರಾಟ ಮುಂದುವರಿಸುತ್ತೀರಾ ಎಂ ಪ್ರಶ್ನೆಗೆ, “ಈಗಾಗಲೇ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ. ಅವರಿಗೆ ದೂರು ಕೊಟ್ಟ ಮೇಲೆ ಸುಮ್ಮನೆ ಇರಲು ಆಗುತ್ತದಾ? ಖಂಡಿತಾ ಮುಂದುವರಿಸುತ್ತೇವೆ. ಪ್ರಧಾನಿಯವರಿಗೆ ಪತ್ರ ಬರೆದಿರುವ ಕಂಟ್ರಾಕ್ಟರ್ ಗಳು ದಡ್ಡರೇನೂ ಅಲ್ಲ. ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಸೇರಿದಂತೆ ನಾನಾ ಇಲಾಖೆಗಳ ಕೆಲಸ ಮಾಡಿಸುವ ಒಂದು ಲಕ್ಷ ಜನ ಇದ್ದಾರೆ. ಬೇರೆ, ಬೇರೆ ಇಲಾಖೆಗಳ ಕಂಟ್ರಾಕ್ಟ್ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿರುವ ನೋವು ಹೇಳಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಯಾರು, ಯಾರನ್ನು ಹೇಗೆ ಸುಲಿಗೆ ಮಾಡಿದರು ಎಂಬುದೂ ಜನರಿಗೆ ಗೊತ್ತಿದೆ. ಹೀಗಾಗಿ ಗುತ್ತಿಗೆದಾರರ ಆರೋಪದ ಬಗ್ಗೆ ಸದನ ಸಮಿತಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು.


ಬಿಜೆಪಿಯವರು ನಮ್ಮ ಸಪೋರ್ಟ್ ಕೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ, ಹಿಂದೆ ಮೈತ್ರಿ ಸರಕಾರ ಮಾಡಿದ್ರಿ. ಈಗ ನಿಮ್ಮ ಪಕ್ಷವನ್ನು ಕೇಳಿದರೆ ಸಪೋರ್ಟ್ ಮಾಡ್ತೀರಾ ಎಂಬ ಪ್ರಶ್ನೆಗೆ, “ಅವರ ಪಾರ್ಟಿ, ಅವರ ತತ್ವ, ಅವರ ಸಿದ್ಧಾಂತ. ಯಾರ ಕೈಲಿ ವೋಟು ಹಾಕಿಸಿಕೊಳ್ಳಬೇಕು, ಯಾರಿಗೆ ಹಾಕಿಸಬೇಕು ಎಂಬುದು ಅವರಿಗೆ ಬಿಟ್ಟದ್ದು. ಕೆಲವೊಮ್ಮೆ ಫ್ರೆಂಡ್ಲಿ ಫೈಟ್ ಕೂಡ ನಡೀತದೆ. ಅವರವರ ಮತದಾರರನ್ನು ಉಳಿಸಿಕೊಳ್ಳುವ ಪ್ರಯತ್ನ ಅವರದು. ಬಿಜೆಪಿವರು, ಕಾಂಗ್ರೆಸ್ ನವರು, ಜೆಡಿಎಸ್ ನವರು ಎಲ್ಲ ಪಕ್ಷದವರು ಅಭ್ಯರ್ಥಿಗಳನ್ನು ಹಾಕಿದ್ದೇವೆ.

ನಾವು 25 ಕ್ಕೆ 25 ಅಥವಾ 20 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ನಮ್ಮ ಶಕ್ತಿ ಮೇಲೆ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಹೆಚ್ಚು ಸಂಖ್ಯೆಗಳನ್ನು ಗೆಲ್ಲುತ್ತೇವೆ ಎಂದಷ್ಟೇ ಹೇಳಬಲ್ಲೆ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕ ಅರುಣ್ ಸಿಂಗ್ ಅವರು ಏನು ಹೇಳಿದ್ದರು, ಯಡಿಯೂರಪ್ಪನವರು ಮೊನ್ನೆ ಏನು ಹೇಳಿದ್ದಾರೆ, ಬೊಮ್ಮಾಯಿ ಅವರ ಸಂಪುಟದ ಮಂತ್ರಿಗಳು ಏನೇನು ಮಾತಾಡಿದರು ಎಂಬುದನ್ನು ನೀವೇ ನೋಡಿದ್ದೀರಲ್ಲಾ, ಇಷ್ಟೆಲ್ಲ ಆದಮೇಲೂ ಅವರು ಹೊಂದಾಣಿಕೆ ಮಾಡಿಕೊಂಡರೆ ಅದು ಅವರ ಸಿದ್ದಾಂತ ಎಂದರು.


ಕನಕಪುರದಲ್ಲಿ ನಮ್ಮ ಪಕ್ಷ 70 ಸಾವಿರ ವೋಟು ಪಡೆಯುವ ಸಾಮರ್ಥ್ಯ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂದಾಗ, “ಬಹಳ ಸಂತೋಷ. ನಾವೆಲ್ಲಿ ಇಲ್ಲ ಎಂದು ಹೇಳಿದ್ದೇವೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ಇದೆ. ನಾವ್ಯಾಕೆ ಅದನ್ನು ಅಲ್ಲಗಳೆಯಲು ಹೋಗೋಣ ಎಂದು ಉತ್ತರಿಸಿದರು.



Join Whatsapp