ಬೆಂಗಳೂರು : 2020ರ ಆ. 11ರಂದು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಹಾನಿಗೀಡಾದ ಆಸ್ತಿಗಳ ಮಾಲೀಕರ ಪೈಕಿ ನಷ್ಟ ಪರಿಹಾರಕ್ಕೆ ಕೇವಲ ಮೂರು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಅವರು, ಹೈಕೋರ್ಟ್ ಆದೇಶದಂತೆ ಕ್ಲೇಮ್ ಕಮಿಷನರ್ ನೇಮಕ ಮಾಡಲಾಗಿದೆ. ಫೆಬ್ರವರಿ 28ರವೆರಗೂ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಈವರೆಗೆ ಮೂರು ಅರ್ಜಿಗಳು ಮಾತ್ರ ಬಂದಿವೆ ಎಂದು ಹೇಳಿದರು.
ಮಾಹಿತಿ ಕೊರತೆ ಮತ್ತು ಕಾರಾಣಾಂತರಗಳಿಂದ ಸಾರ್ವಜನಿಕರು ಅರ್ಜಿ ಸಲ್ಲಿಸದೇ ಇರಬಹುದು. ಘಟನೆಯಲ್ಲಿ ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ 50 ಪ್ರಕರಣಗಳು ದಾಖಲಾಗಿವೆ. ಅಂತಹ ಎಲ್ಲರೂ ನಷ್ಟ ಪರಿಹಾರ ಕೋರಬಹುದು. ಅರ್ಜಿ ಸಲ್ಲಿಕೆಗೆ ಕಾಲಾವಕಾಶ ವಿಸ್ತರಿಸಿದ್ದು ಪೊಲೀಸ್ ಠಾಣೆಗಳಲ್ಲೂ ಸಭೆ ನಡೆಸಿ ಜನರಿಗೆ ಮಾಹಿತಿ ನೀಡಲಾಗುವುದು.
ಅರ್ಜಿಯೊಂದಿಗೆ ನಷ್ಟಕ್ಕೀಡಾಗಿರುವ ಆಸ್ತಿಗೆ ಸಂಬಂಧಿಸಿದ ದಾಖಲೆ, ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ಪ್ರತಿ, ವೀಡಿಯೊ ತುಣುಕು ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸಬೇಕು. ಆ ಬಳಿಕ ನಷ್ಟಕ್ಕೀಡಾದ ಆಸ್ತಿಗಳ ಮೌಲ್ಯಮಾಪನ ನಡೆಸಿ ಹೈಕೋರ್ಟ್ ಗೆ ವರದಿ ಸಲ್ಲಿಸಲಾಗುವುದು. ಅದನ್ನು ಆಧರಿಸಿ ಗಲಭೆಗೆ ಕಾರಣವಾದ ವ್ಯಕ್ತಿ ಅಥವಾ ಸಂಘಟನೆಗಳಿಂದ ನಷ್ಟ ವಸೂಲಿಗೆ ನ್ಯಾಯಾಲಯ ಆದೇಶ ಹೊರಡಿಸಲಿದೆ ಎಂದು ಕೆಂಪಣ್ಣ ತಿಳಿಸಿದರು.