ಬೆಂಗಳೂರು : ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ಹೈಕೋರ್ಟ್ ಏಕಸದಸ್ಯ ನಾಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾ. ಮೆಕೆಲ್ ಡಿ.ಕುನ್ನಾ ಅವರು ಸಂಪತ್ ರಾಜ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಳಿಕ, ಜಾಮೀನು ನೀಡಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಎರಡು ಆರೋಪ ಪಟ್ಟಿ ದಾಖಲಿಸಲಾಗಿದೆ. ಆದರೆ, ಪ್ರಬಲ ಸಾಕ್ಷ್ಯಾಧಾರ ಸಲ್ಲಿಸಲಾಗಿಲ್ಲ. ಆರೋಪ ಪಟ್ಟಿಯಲ್ಲಿ ಸಂಪತ್ ರಾಜ್ ಹೆಸರನ್ನು ತಡವಾಗಿ ದಾಖಲಿಸಲಾಗಿದೆ. ಇದು ರಾಜಕೀಯ ವೈಷಮ್ಯದ ಪ್ರಕರಣ ಎಂದು ಸಂಪತ್ ರಾಜ್ ಅವರ ವಕೀಲರಾದ ಮಹೇಶ್ ಮತ್ತು ಸಿ.ವಿ. ನಾಗೇಶ್ ವಾದಿಸಿದ್ದರು.
ಕಳೆದ ಆಗಸ್ಟ್ ತಿಂಗಳಿನಲ್ಲಿ ಫೇಸ್ ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಹಿಂಸಾತ್ಮಕ ಗಲಭೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.